ಮುರುಘಾ ಟ್ರಸ್ಟ್‌ ಆಸ್ತಿ ಮೌಲ್ಯ ₹1,600 ಕೋಟಿ, ನಿರ್ವಹಣೆ ಅಗತ್ಯ: ಆಡಳಿತಾಧಿಕಾರಿ ನೇಮಕ ಸಮರ್ಥಿಸಿ ಸರ್ಕಾರದ ಮೇಲ್ಮನವಿ

ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸ್ವಾಮೀಜಿಯುವರನ್ನು ಅಪಾರ ಮೌಲ್ಯ ಹೊಂದಿರುವ ಮಠದ ಆಡಳಿತ ನಡೆಸಲು ಬಿಡುವುದರಿಂದ ದುರಾಡಳಿತ ಅಥವಾ ಹಣ ದುರ್ಬಳಕೆಯಾಗುವ ಸಾಧ್ಯತೆ ಇರುತ್ತದೆ ಎಂದು ಉಲ್ಲೇಖ.
Murugha Mutt and Dr. Shivamurthy Murugha Sharanaru
Murugha Mutt and Dr. Shivamurthy Murugha Sharanaru

ಮುರುಘಾ ಮಠದ ಟ್ರಸ್ಟ್‌ ಹಾಗೂ ಸಂಸ್ಥೆಗಳ ಆಸ್ತಿ ಹಾಗೂ ಸಂಪತ್ತಿನ ಮೌಲ್ಯ ₹1,600 ಕೋಟಿಗೂ ಹೆಚ್ಚಿದೆ, ಇವುಗಳ ನಿರಂತರ ಮೇಲ್ವಿಚಾರಣೆ ಮತ್ತು ಸಮರ್ಥ ನಿರ್ವಹಣೆ ಅಗತ್ಯವಿದೆ. ಈ ನೆಲೆಯಲ್ಲಿ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲಾಗಿತ್ತು ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಸಮರ್ಥಿಸಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ ಏಕಸದಸ್ಯ ಪೀಠದ ಆದೇಶ ವಜಾ ಮಾಡಬೇಕು ಎಂದು ಕೋರಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಅವರು ಸೋಮವಾರ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ತಿಳಿಸಿದರು. ಮಠದ ಭಕ್ತ ಎಚ್‌ ಏಕನಾಥಯ್ಯ ಅವರು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಪೀಠದ ಮುಂದೆ ಹಾಜರಾದ ಎಜಿ ಈ ವಿಚಾರ ಬಹಿರಂಗಪಡಿಸಿದರು.

ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರದ ಸಮರ್ಥನೆ ಏನು?

 • ಮಠ ಹಾಗೂ ಸಂಬಂಧಿತ ಸಂಸ್ಥೆಗಳ ಆಸ್ತಿಯ ಮೌಲ್ಯವು ₹1,600 ಕೋಟಿಗೂ ಹೆಚ್ಚಿದೆ. ಈ ಸಂಸ್ಥೆಗಳು ಸಮರ್ಥವಾಗಿ ಕಾರ್ಯನಿರ್ವಹಿಸಬೇಕೆಂದರೆ ಅವುಗಳ ಮೇಲೆ ನಿರಂತರ ನಿಗಾ ಮತ್ತು ಸಮರ್ಥ ನಿರ್ವಹಣೆ ಅಗತ್ಯವಿದೆ. ಈ ನೆಲೆಯಲ್ಲಿ ಏಕಸದಸ್ಯ ಪೀಠದ ಆದೇಶಕ್ಕೆ ಅಸ್ತು ಎಂದರೆ ಮಠ ಮತ್ತು ಅದರ ಸಂಬಂಧಿತ ಸಂಸ್ಥೆಗಳಿಗೆ ಸರಿಪಡಿಸಲಾರದಷ್ಟು ಹಾನಿಯಾಗುತ್ತದೆ.

 • ಅಸಂಖ್ಯಾತ ಭಕ್ತರು, ಮಠದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ವಿದ್ಯಾರ್ಥಿಗಳು, ವಸತಿ ನಿಲಯದಲ್ಲಿ ನೆಲೆಸಿರುವವರಿಗೆ ಏಕಸದಸ್ಯ ಪೀಠದ ಆದೇಶವು ಸರಿಪಡಿಸಲಾರದಷ್ಟು ಹಾನಿ ಉಂಟು ಮಾಡುತ್ತದೆ.

 • 2022ರ ಡಿಸೆಂಬರ್‌ 13ರಂದು ನೇಮಕ ಮಾಡಿದ ಆಡಳಿತಾಧಿಕಾರಿಯು ಮಠ ಮತ್ತು ಅದರ ಸಂಬಂಧಿತ ಸಂಸ್ಥೆಗಳು ಸಮರ್ಥವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಹಲವು ಕ್ರಮಕೈಗೊಂಡಿದ್ದಾರೆ. ಹೀಗಾಗಿ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡುವ ಮೂಲಕ ಆ ವ್ಯವಸ್ಥೆ ಮುಂದುವರಿಯಲು ಅನುಮತಿಸಬೇಕು.

 • ಭಕ್ತರು ಮತ್ತು ಸಾರ್ವಜನಿಕ ಟ್ರಸ್ಟ್‌ನಡಿ ಬರುವ ಸ್ಥಿರಾಸ್ತಿ ಜವಾಬ್ದಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೈಗೊಂಡಿರುವ ಕ್ರಮವನ್ನು ಏಕಸದಸ್ಯ ಪೀಠವು ಪರಿಗಣಿಸಬೇಕಿತ್ತು.

 • ಧಾರ್ಮಿಕ ಕೇಂದ್ರದ ಆಡಳಿತಕ್ಕೆ ಒಳಪಟ್ಟ ಟ್ರಸ್ಟ್‌ ಆಸ್ತಿ, ಉದ್ಯೋಗಿಗಳು ಹಾಗೂ ಸೇವಕರ ನಿರ್ವಹಣೆಯು ಧಾರ್ಮಿಕ ಚಟುವಟಿಕೆಯಲ್ಲ. ಅದು ಜಾತ್ಯತೀತ ಚಟುವಟಿಕೆಯಾಗಿದೆ. ಹೀಗಾಗಿ, ಅಗತ್ಯ ಬಿದ್ದರೆ ಅಂಥ ಸಂದರ್ಭದಲ್ಲಿ ಜಾತ್ಯತೀತ ಚಟುವಟಿಕೆಗಳನ್ನು ನಿಯಂತ್ರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ.

 • ಮಠದ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ಮಕ್ಕಳು ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸುವ ಉದ್ಯೋಗಿಗಳು ಮತ್ತು ಸಿಬ್ಬಂದಿಯ ಬದುಕುವ ಹಕ್ಕನ್ನು ಸಂರಕ್ಷಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ತಾತ್ಕಾಲಿಕ ಕ್ರಮಕೈಗೊಂಡಿದೆ. ಆದರೆ, ಇದನ್ನು ಪರಿಗಣಿಸಲು ವಿಫಲವಾಗಿರುವ ಏಕಸದಸ್ಯ ಪೀಠವು ಟ್ರಸ್ಟ್‌ನ ನಿರ್ವಹಣೆಯನ್ನು ಸರ್ಕಾರ ತನ್ನ ವಶಕ್ಕೆ ಪಡೆದಿದೆ. ಇದು ಸಂವಿಧಾನದ 26ನೇ ವಿಧಿಯ ಉಲ್ಲಂಘನೆ ಎಂದು ಹೇಳಿದೆ. ಹೀಗಾಗಿ, ಏಕಸದಸ್ಯ ಪೀಠದ ಆದೇಶ ವಜಾ ಮಾಡಬೇಕು.

 • ಸಂವಿಧಾನದ 21ಎ ವಿಧಿಯು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕನ್ನು ಖಾತರಿಪಡಿಸಿದೆ. ನೈತಿಕ ದೃಷ್ಟಿಯು ಸೇರಿದಂತೆ ಮುರುಘಾ ಶರಣರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಮಠದ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಮತ್ತು ಅವರ ಪೋಷಕರಿಗೆ ಆಘಾತ ಉಂಟು ಮಾಡಿದೆ. ಅನಿರ್ಬಂಧಿತವಾಗಿ ಮಕ್ಕಳು ಶಿಕ್ಷಣ ಪಡೆಯುವುದನ್ನು ಮುಂದುವರಿಸುವಂತೆ ಮಾಡುವುದು ರಾಜ್ಯ ಸರ್ಕಾರದ ಸಾಂವಿಧಾನಿಕ ಹೊಣೆಗಾರಿಕೆಯಾಗಿದೆ. ಮುರುಘಾ ಶರಣರ ಆಡಳಿತದಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ, ಅವಿನಾಶ ಮೆಹರೋತ್ರಾ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಪರಿಗಣಿಸಿ ರಾಜ್ಯ ಸರ್ಕಾರವು ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ.

 • ಮಠದ ಆಡಳಿತ ಮತ್ತು ಅದರ ಕೆಳಗೆ ಬರುವ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ದಾರಿಯನ್ನು ಆಕ್ಷೇಪಾರ್ಹವಾದ ಏಕಸದಸ್ಯ ಪೀಠದ ಆದೇಶವು ತೋರಿಸುವುದಿಲ್ಲ. ಲಿಂಗಾಯತ ಸಮುದಾಯದ ಪ್ರಮುಖರು ಒಟ್ಟಾಗಿ ಸೇರಿ ಮಠದ ಆಡಳಿತಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ಏಕಸದಸ್ಯ ಪೀಠ ಹೇಳಿದೆ. ಆದರೆ, ಮಠದ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ವ್ಯವಸ್ಥಿತ ಚೌಕಟ್ಟು ಹಾಕಿಲ್ಲ.

 • ಆರೋಪಿ ಸ್ವಾಮೀಜಿಯ ವಿರುದ್ಧದ ನ್ಯಾಯಯುತ ತನಿಖೆಯನ್ನು ಏಕಸದಸ್ಯ ಪೀಠ ಪರಿಗಣಿಸಿಲ್ಲ. ಮಠದ ಆಡಳಿತವನ್ನು ಸ್ವಾಮೀಜಿ ಅಥವಾ ಅವರು ಪವರ್‌ ಆಫ್‌ ಅಟಾರ್ನಿ ನೀಡಿರುವವರ ಮೂಲಕ ನಡೆಸುವುದು ಆರೋಪಿತ ಅಪರಾಧದ ತನಿಖೆಗೆ ಅಡ್ಡಿಯಾಗುತ್ತದೆ. ಸ್ವಾಮೀಜಿ ವಿರುದ್ಧ ಗಂಭೀರ ಆರೋಪವನ್ನು ಪರಿಗಣಿಸಿ ಆಡಳಿತಾಧಿಕಾರಿ ನೇಮಕಾತಿಯನ್ನು ಏಕಸದಸ್ಯ ಪೀಠವು ಎತ್ತಿ ಹಿಡಿಯಬೇಕಿತ್ತು.

 • ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸ್ವಾಮೀಜಿಯು ಅಪಾರ ಮೌಲ್ಯ ಹೊಂದಿರುವ ಮಠದ ಆಡಳಿತ ನಡೆಸಲು ಬಿಡುವುದರಿಂದ ದುರಾಡಳಿತ ಅಥವಾ ಹಣ ದುರ್ಬಳಕೆಯಾಗುವ ಸಾಧ್ಯತೆ ಇರುತ್ತದೆ. ಆಧ್ಯಾತ್ಮಿಕ ನಾಯಕರಾದ ಸ್ವಾಮೀಜಿಯು ನಂಬಿಕೆ ಕಳೆದುಕೊಂಡಿರುವುದರಿಂದ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ ಎಂಬುದನ್ನು ಏಕಸದಸ್ಯ ಪೀಠ ಪರಿಗಣಿಸಿಲ್ಲ.

 • ಆಡಳಿತಾಧಿಕಾರಿ ನೇಮಕವು ಸಂಸ್ಥೆಗಳ ನಿರ್ವಹಣೆಯ ಆಡಳಿತ ಮತ್ತು ಮಠಾಧಿಪತಿಯ ಮೂಲಭೂತ ಹಕ್ಕುಗಳನ್ನು ಕಸಿಯುತ್ತಿವೆ ಎಂದು ಹೇಳುವ ಮೂಲಕ ಏಕಸದಸ್ಯ ಪೀಠ ಪ್ರಮಾದ ಎಸಗಿದೆ.

 • ತನ್ನ ಮುಂದೆ ಎದುರಾದ ಪರಿಸ್ಥಿತಿಯನ್ನು ಪರಿಗಣಿಸಿ ಸಂವಿಧಾನದ 162ನೇ ವಿಧಿಯಡಿ ದೊರೆತಿರುವ ಕಾರ್ಯಕಾರಿ ಅಧಿಕಾರಿ ಬಳಸಿ ರಾಜ್ಯ ಸರ್ಕಾರವು ಆಡಳಿತಾಧಿಕಾರಿ ನೇಮಕ ಮಾಡಲು ಸಮರ್ಥವಾಗಿದೆ.

 • ಅಗತ್ಯ ಧಾರ್ಮಿಕ ಆಚರಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ಅಥವಾ ಮಧ್ಯಪ್ರವೇಶವನ್ನು ಆಡಳಿತಾಧಿಕಾರಿಯು ಮಾಡುವುದಿಲ್ಲ. ಮಠ ಮತ್ತು ಅದರ ಸಂಬಂಧಿತ ಸಂಸ್ಥೆಗಳ ಆಡಳಿತವನ್ನು ಮಾತ್ರ ನೋಡಿಕೊಳ್ಳುತ್ತಾರೆ ಎಂದು ಸರ್ಕಾರವು ಮೇಲ್ಮನವಿಯಲ್ಲಿ ಆಡಳಿತಾಧಿಕಾರಿ ನೇಮಕಾತಿಯನ್ನು ಸಮರ್ಥಿಸಿದೆ.

Kannada Bar & Bench
kannada.barandbench.com