ರಾಷ್ಟ್ರೀಯ ಭದ್ರತೆ ಎಂಬುದು ಸ್ವಾಭಾವಿಕ ನ್ಯಾಯಕ್ಕಿಂತ ಮಿಗಿಲು: ಸೆಲೆಬಿ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ನ್ಯಾಯಮೂರ್ತಿ ಸಚಿನ್ ದತ್ತ ಅವರು ನ್ಯಾಯಪ್ರಕ್ರಿಯೆಯ ಔಚಿತ್ಯಕ್ಕಿಂತಲೂ ರಾಷ್ಟ್ರೀಯ ಭದ್ರತೆ ಮುಖ್ಯ ಎಂದರು.
Celebi
Celebi
Published on

ಟರ್ಕಿ ಮೂಲದ ವಿಮಾನಯಾನ ಕಂಪನಿ ಸೆಲೆಬಿಯ ಭದ್ರತಾ ಅನುಮತಿಯನ್ನು ಪೂರ್ವ ಸೂಚನೆ ಇಲ್ಲದೆ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಗುರುವಾರ ಎತ್ತಿಹಿಡಿದಿದ್ದು ರಾಷ್ಟ್ರೀಯ ಭದ್ರತೆ ಎಂಬುದು ಸ್ವಾಭಾವಿಕ ನ್ಯಾಯದ ತತ್ವಗಳನ್ನು ಅತಿಕ್ರಮಿಸಬಹುದು ಎಂದು ತೀರ್ಪು ನೀಡಿದೆ [ ಸೆಲೆಬಿ ಏರ್‌ಪೋರ್ಟ್‌ ಗ್ರೌಂಡ್ ಸರ್ವೀಸಸ್ ಇಂಡಿಯಾ ಪ್ರೈ ಲಿಮಿಟೆಡ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]

ನ್ಯಾಯಮೂರ್ತಿ ಸಚಿನ್ ದತ್ತ ಅವರು ನ್ಯಾಯಪ್ರಕ್ರಿಯೆಯ ಔಚಿತ್ಯಕ್ಕಿಂತಲೂ ರಾಷ್ಟ್ರೀಯ ಭದ್ರತೆ ಮುಖ್ಯ ಎಂದರು.

Also Read
ಟರ್ಕಿ ಸಂಸ್ಥೆ ಸೆಲೆಬಿ ಭದ್ರತಾ ಅನುಮತಿ ರದ್ದು: ವಿಷಾದಕ್ಕಿಂತಲೂ ಸುರಕ್ಷಿತವಾಗಿರುವುದು ಉತ್ತಮ ಎಂದ ದೆಹಲಿ ಹೈಕೋರ್ಟ್

“ಸ್ವಾಭಾವಿಕ ನ್ಯಾಯದ ತತ್ವಗಳು ನಿಸ್ಸಂದೇಹವಾಗಿ ಪವಿತ್ರವಾದವುಗಳಾದರೂ ಉಳಿದೆಲ್ಲಾ ಹಕ್ಕುಗಳನ್ನು ಅನುಭವಿಸಲು ಕ್ಷೇತ್ರದ ಭದ್ರತೆ ಪೂರ್ವಭಾವಿ ಷರತ್ತಾಗಿರುತ್ತದೆ ಎಂಬುದು ತೀವ್ರ ಸಾಂವಿಧಾನಿಕ ಸತ್ಯ” ಎಂದು ಅದು ನುಡಿಯಿತು.

ಎಕ್ಸ್‌ ಸರ್ವೀಸ್‌ಮನ್‌ ಸೆಕ್ಯೂರಿಟಿ ಸರ್ವಿಸಸ್‌ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ  ಸುಪ್ರೀಂ ಕೋರ್ಟ್ ತೀರ್ಪನ್ನು ನ್ಯಾಯಾಲಯ ಅವಲಂಬಿಸಿದೆ. ಭದ್ರತೆಯ ನಿಬಂಧನೆಗಳಿಗೆ ನ್ಯಾಯಪ್ರಕ್ರಿಯೆಯ ಔಚಿತ್ಯ ಮಣಿಯಬಹುದಾಗಿದ್ದು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಯಾವುದೇ ಪಕ್ಷಕಾರರು ಸ್ವಾಭಾವಿಕ ನ್ಯಾಯದ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸಲಾಗದು ಎಂದು ತೀರ್ಪಿನಲ್ಲಿ ವಿವರಿಸಲಾಗಿತ್ತು.

ನಾಗರಿಕ ವಿಮಾನಯಾನ ಸಚಿವಾಲಯ ಮೇ 15, 2025 ರಂದು ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಸೆಲೆಬಿಯ ಭದ್ರತಾ ಅನುಮತಿ  ಹಿಂತೆಗೆದುಕೊಂಡಿತ್ತು. ಇತ್ತೀಚಿನ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಸಂದರ್ಭದಲ್ಲಿ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಆರೋಪದಡಿ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಿದ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿತ್ತು.

Also Read
ಟರ್ಕಿ ಮೂಲದ ಸೆಲೆಬಿ ನಿರ್ಬಂಧ: ವಿಮಾನ ನಿಲ್ದಾಣದಲ್ಲಿ ಸರಕು ಸೇವೆಗೆ ಟೆಂಡರ್ ಕರೆಯದೆ ಬೇರೆ ದಾರಿ ಇಲ್ಲ ಎಂದ ಎಎಐ

ಭಾರತ ಸರ್ಕಾರದ ನಿರ್ಧಾರ ಮನಸೋಇಚ್ಛೆಯಿಂದ ಕೂಡಿದ್ದು ಅದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ ಎಂದು ಟರ್ಕಿಯ ಸೆಲೆಬಿ ಏವಿಯೇಷನ್ ಹೋಲ್ಡಿಂಗ್‌ನ ಭಾರತೀಯ ಅಂಗಸಂಸ್ಥೆಯಾದ ಸೆಲೆಬಿ ಏರ್ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ್ಯಾಯಾಲಯದ ಮೆಟ್ಟಿಲೇರಿತ್ತು.

ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ದೆಹಲಿ), ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಹೈದರಾಬಾದ್) ಮತ್ತು ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವೃತ್ತಿಪರ ಭೂ ನಿರ್ವಹಣಾ ಸೇವೆಗಳನ್ನು ಸಂಸ್ಥೆ ಒದಗಿಸುತ್ತದೆ.

Kannada Bar & Bench
kannada.barandbench.com