ಪೋಕ್ಸೊ ಪ್ರಕರಣ: ಶಿವಮೂರ್ತಿ ಮುರುಘಾ ಶರಣರ ಜಾಮೀನು ಆದೇಶ ಕಾಯ್ದಿರಿಸಿದ ಚಿತ್ರದುರ್ಗದ ವಿಶೇಷ ನ್ಯಾಯಾಲಯ

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಮುರುಘಾ ಶರಣರಿಗೆ ನ್ಯಾಯಾಲಯ ಅನುಮತಿಸಿದೆ. ಹೀಗಾಗಿ, ನಾಳೆ ಅಥವಾ ನಾಡಿದ್ದು, ಅವರನ್ನು ಚಿತ್ರದುರ್ಗದ ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
Murugha Sharanaru and Chitradurga court
Murugha Sharanaru and Chitradurga court

ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆಯ ಕುರಿತಾದ ಆದೇಶವನ್ನು ಸೆಪ್ಟೆಂಬರ್‌ 23ಕ್ಕೆ ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಸೋಮವಾರ ಕಾಯ್ದಿರಿಸಿದೆ. ಪ್ರಕರಣದ ಎರಡನೇ ಆರೋಪಿ ಎಸ್‌ ರಶ್ಮಿ ಅವರ ಜಾಮೀನು ಕೋರಿಕೆ ಕುರಿತಾದ ಆದೇಶ ಇದಕ್ಕೂ ಒಂದು ದಿನ ಮುನ್ನ ಅಂದರೆ ಸೆಪ್ಟೆಂಬರ್‌ 22ರಂದು ಹೊರಬೀಳಲಿದೆ.

ಇಂದು ನಡೆದ ವಿಚಾರಣೆ ವೇಳೆ ಸುಮಾರು ಎರಡು ತಾಸು ಪ್ರಾಸಿಕ್ಯೂಷನ್‌ ವಾದ ಆಲಿಸಿದ ವಿಶೇಷ ನ್ಯಾಯಾಧೀಶರಾದ ಬಿ ಕೆ ಕೋಮಲಾ ಅವರು ತೀರ್ಪು ಕಾಯ್ದಿರಿಸಿದರು.

ಪ್ರಾಸಿಕ್ಯೂಷನ್‌ ಪ್ರತಿನಿಧಿಸಿದ್ದ ಸರ್ಕಾರಿ ಅಭಿಯೋಜಕರಾದ ಕೆ ಬಿ ನಾಗವೇಣಿ ಅವರು “ಮಕ್ಕಳ ಕಲ್ಯಾಣ ಸಮಿತಿಯು ನಡೆಸಿದ ಆಪ್ತ ಸಮಾಲೋಚನೆಯ ಸಂದರ್ಭದಲ್ಲಿ ಸಂತ್ರಸ್ತ ಹೆಣ್ಣು ಮಕ್ಕಳು ನೀಡಿರುವ ಹೇಳಿಕೆ ಮೇಲ್ನೋಟಕ್ಕೆ ಸತ್ಯದಿಂದ ಕೂಡಿದೆ. ಮಹಜರ್‌ ಸಂದರ್ಭದಲ್ಲಿ ಸಂಗ್ರಹವಾಗಿರುವ ಸಾಕ್ಷ್ಯ ಮತ್ತು ಸಂತ್ರಸ್ತ ಮಕ್ಕಳ ಹೇಳಿಕೆಯಲ್ಲಿ ಸಾಮ್ಯತೆ ಇದೆ. ವೈದ್ಯಕೀಯ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಇನ್ನಷ್ಟೇ ಬರಬೇಕಿದೆ. ಶಿವಮೂರ್ತಿ ಶರಣರು ಪ್ರಭಾವಿಯಾಗಿರುವುದರಿಂದ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಿದರೆ ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.  ಹೀನ ಕೃತ್ಯದಲ್ಲಿ ಆರೋಪಿಯಾಗಿರುವುದರಿಂದ ಮುರುಘಾ ಶರಣರಿಗೆ ವಯಸ್ಸಾಗಿದೆ ಎಂಬ ಆಧಾರದಲ್ಲಿ ಜಾಮೀನು ನೀಡಬಾರದು” ಎಂದು ಆಕ್ಷೇಪಿಸಿದರು.

ಮುಂದುವರಿದು, “ಎರಡನೇ ಆರೋಪಿ ರಶ್ಮಿ ಅವರ ಪಾತ್ರದಿಂದಾಗಿ ಕೃತ್ಯ ನಡೆದಿದೆ. ಮಹಿಳೆ ಎಂಬ ಕಾರಣಕ್ಕೆ ಅವರಿಗೆ ಜಾಮೀನು ನೀಡಬಾರದು. ಈಕೆಯೇ ಪ್ರಕರಣದ ಕೇಂದ್ರ” ಎಂದು ತೀವ್ರ ವಿರೋಧ ದಾಖಲಿಸಿದರು.

ಶಿವಮೂರ್ತಿ ಮುರುಘಾ ಶರಣರನ್ನು ಪ್ರತಿನಿಧಿಸಿದ್ದ ವಕೀಲ ಕೆ ಎನ್‌ ವಿಶ್ವನಾಥಯ್ಯ ಅವರು “ಲೈಂಗಿಕ ಕಿರುಕುಳ ಆರೋಪ ಮಾಡಿರುವ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ವಾಸವಿದ್ದು, ಅವರಿಗೂ ಶ್ರೀಗಳಿಗೂ ಯಾವುದೇ ತೆರನಾದ ಸಂಪರ್ಕವಿರಲಿಲ್ಲ. ಆರೋಪ ಮಾಡಿರುವ ಮಕ್ಕಳನ್ನು ಸ್ವಾಮೀಜಿ ನೋಡಿಯೇ ಇರಲಿಲ್ಲ. ಮುರುಘಾ ಮಠದ ಮಾಜಿ ಕಾರ್ಯದರ್ಶಿ ಎಸ್‌ ಕೆ ಬಸವರಾಜನ್‌ ಅವರು ಹಗೆತನದಿಂದ ಪ್ರಕರಣದಲ್ಲಿ ಮುರುಘಾ ಶರಣರನ್ನು ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ. ಮಠಾಧೀಶರಾಗಿ ಧಾರ್ಮಿಕ ಕಾರ್ಯಗಳಲ್ಲಿ ಸ್ವಾಮೀಜಿ ತೊಡಗಿಸಿಕೊಂಡಿದ್ದು, ಯಾವುದೇ ರೀತಿಯಲ್ಲೂ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ" ಎಂದು ವಾದಿಸಿದ್ದರು.

“ಮಾಜಿ ಶಾಸಕ ಎಸ್‌ ಕೆ ಬಸವರಾಜನ್‌ ಅವರು ಮಠದೊಂದಿಗೆ ತಿಕ್ಕಾಟದಲ್ಲಿ ತೊಡಗಿದ್ದನ್ನು ವಿಸ್ತೃತವಾಗಿ ವಿವರಿಸಿ, ಸ್ವಾಮೀಜಿಯನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ” ಎಂದು ಆಕ್ಷೇಪಿಸಿದ್ದರು.

ಒಟ್ಟು 15 ಆಧಾರಗಳ ಮೇಲೆ ಡಾ. ಶಿವಮೂರ್ತಿ ಮುರುಘಾ ಶರಣರು ಜಾಮೀನಿಗೆ ಮನವಿ ಮಾಡಿದ್ದಾರೆ. ರಶ್ಮಿ ಅವರ ಪರವಾಗಿ ವಕೀಲ ಡಿ ಎಂ ಬಸವರಾಜ್‌ ವಾದ ಮಂಡಿಸಿದ್ದರು.

Also Read
ಮುರುಘಾ ಶರಣರ ಜಾಮೀನಿಗೆ ರಾಜ್ಯ ಸರ್ಕಾರದಿಂದ ಆಕ್ಷೇಪ; ಮಠದ ಚೆಕ್‌, ದಾಖಲೆಗಳಿಗೆ ಸ್ವಾಮೀಜಿ ಸಹಿಗೆ ವಿರೋಧ

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಶಿವಮೂರ್ತಿ ಮುರುಘಾ ಶರಣರಿಗೆ ನ್ಯಾಯಾಲಯವು ಸೋಮವಾರ ಅನುಮತಿಸಿದೆ. ಹೀಗಾಗಿ, ನಾಳೆ ಅಥವಾ ನಾಡಿದ್ದು, ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗದ ಜೈಲಿನಿಂದ ಮೆಗ್ಗಾನ್‌ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.

ಶಿವಮೂರ್ತಿ ಮುರುಘಾ ಶರಣರು ಕರೋನರಿ ಆಂಜಿಯೋಗ್ರಾಮ್‌ ಚಿಕಿತ್ಸೆ ಪಡೆಯಲು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಲು ಅನುಮತಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಇದನ್ನು ನಿರಾಕರಿಸಿದ್ದ ನ್ಯಾಯಾಲಯವು ಸಮೀಪದಲ್ಲಿ ಕರೋನರಿ ಆಂಜಿಯೋಗ್ರಾಮ್‌ ಚಿಕಿತ್ಸೆ ಸಿಗುವ ಆಸ್ಪತ್ರೆಗಳ ಬಗ್ಗೆ ಮಾಹಿತಿ ನೀಡುವಂತೆ ಪ್ರಾಸಿಕ್ಯೂಷನ್‌ಗೆ ಸೆಪ್ಟೆಂಬರ್‌ 9ರಂದು ಸೂಚಿಸಿತ್ತು. ಇದರ ಭಾಗವಾಗಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಪ್ರಾಸಿಕ್ಯೂಷನ್‌ ಮಾಹಿತಿ ನೀಡಿತ್ತು. ಇದಕ್ಕೆ ನ್ಯಾಯಾಲಯ ಅನುಮತಿಸಿದೆ.

Kannada Bar & Bench
kannada.barandbench.com