ಪೋಕ್ಸೊ ಪ್ರಕರಣ: ಸಿಡಬ್ಲ್ಯುಸಿ ವರದಿ, ಬಸವರಾಜನ್‌, ಸೌಭಾಗ್ಯ ಕರೆ ದಾಖಲೆ ಕೋರಿಕೆ; ಆದೇಶ ಕಾಯ್ದರಿಸಿದ ವಿಶೇಷ ನ್ಯಾಯಾಲಯ

“ನಾವು ಕೋರಿರುವ ದಾಖಲೆಗಳು ನಮ್ಮ ಪರವಾಗಿದ್ದರೆ ನಮಗೆ ಅನುಕೂಲವಾಗುತ್ತವೆ. ಅವುಗಳು ನಮಗೆ ವಿರುದ್ಧವಾಗಿದ್ದರೆ ಅದನ್ನು ಪ್ರಾಸಿಕ್ಯೂಷನ್‌ ಬಳಕೆ ಮಾಡಿಕೊಳ್ಳಬಹುದು” ಎಂದ ಹಿರಿಯ ವಕೀಲರಾದ ಸಿ ಎಚ್‌ ಹನುಮಂತರಾಯ.
Chitradurga District Court Complex
Chitradurga District Court Complex
Published on

ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಪ್ರಕರಣದ ಅಡಿ ನಾಲ್ಕನೇ ಆರೋಪಿ ಪರಮಶಿವಯ್ಯ ಮತ್ತು ಐದನೇ ಆರೋಪಿ ಎನ್‌ ಗಂಗಾಧರ ಅವರ ಪರವಾಗಿ ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ವಿವಿಧ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕು ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್‌ 21ಕ್ಕೆ ಕಾಯ್ದಿರಿಸಿದೆ.

ಕಾನೂನಿನ ಅಡಿ ಸಾಧ್ಯತೆಗಳ ಕುರಿತು ವಿಸ್ತೃತವಾಗಿ ವಾದ-ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಧೀಶರಾದ ಬಿ ಕೆ ಕೋಮಲಾ ಅವರು ಆದೇಶ ಕಾಯ್ದಿರಿಸಿದ್ದಾರೆ.

ಪ್ರಾಸಿಕ್ಯೂಷನ್‌ ಪರವಾಗಿ ಸರ್ಕಾರಿ ಅಭಿಯೋಜಕಿ ಕೆ ಬಿ ನಾಗವೇಣಿ ಅವರು “ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗ ಅರ್ಜಿದಾರರು ಕೋರಿರುವ ದಾಖಲೆಗಳನ್ನು ಸಲ್ಲಿಸಲಾಗದು. ತನಿಖಾಧಿಕಾರಿಗಳು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ಅವುಗಳನ್ನು ಕೋರುವ ಹಕ್ಕು ಹೊಂದಿದ್ದಾರೆ. ತನಿಖೆಯಲ್ಲಿ ಮಧ್ಯಪ್ರವೇಶವಾಗಬಾರದು. ತನಿಖೆಯ ಹಂತದಲ್ಲಿ ಅರ್ಜಿದಾರರು ಕೋರಿರುವ ದಾಖಲೆಗಳನ್ನು ತರಿಸುವುದರಿಂದ ತನಿಖೆಗೆ ಹಿನ್ನಡೆಯಾಗುತ್ತದೆ ಹೀಗಾಗಿ, ಈ ಹಂತದಲ್ಲಿ ಅರ್ಜಿದಾರರ ಕೋರಿಕೆಯು ಮಾನ್ಯತೆಗೆ ಅರ್ಹವಾಗಿಲ್ಲ” ಎಂದು ಆಕ್ಷೇಪಿಸಿದರು.

ಇದಕ್ಕೆ ಅರ್ಜಿದಾರರ ಪರವಾಗಿ ಪ್ರತ್ಯುತ್ತರ ವಾದ ಮಂಡಿಸಿದ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ ಅವರು “ತನಿಖೆ, ಸಾಕ್ಷಿಗಳ ವಿಚಾರಣೆ, ವಿಚಾರಣೆ, ಇತರೆ ಪ್ರಕ್ರಿಯೆಗಳ ಸಂದರ್ಭದಲ್ಲಿ ದಾಖಲೆಗಳನ್ನು ತರಿಸಲು ಸಿಆರ್‌ಪಿಸಿ ಸೆಕ್ಷನ್‌ 91ರ ಬಳಕೆಗೆ ಕಾನೂನಿನ ಅಡಿಯಲ್ಲಿ ಯಾವುದೇ ನಿರ್ಬಂಧವಿಲ್ಲ. ಯಾವುದೇ ಸಂದರ್ಭದಲ್ಲಾದರೂ ಸತ್ಯವನ್ನು ಕಂಡುಕೊಳ್ಳಲು ಸಂಬಂಧಿತ ದಾಖಲೆಗಳನ್ನು ಸೆಕ್ಷನ್‌ 91ರ ಅಡಿ ತರಿಸಿಕೊಳ್ಳಲು ನ್ಯಾಯಾಲಯಕ್ಕೆ ಅವಕಾಶವಿದೆ” ಎಂದರು.

Soubhagya, S K Basavarajan and Murugha Mutt, Chitradurga
Soubhagya, S K Basavarajan and Murugha Mutt, Chitradurga

ಮುಂದುವರಿದು, “ನಾವು ಕೋರಿರುವ ದಾಖಲೆಗಳು ನಮ್ಮ ಪರವಾಗಿದ್ದರೆ ನಮಗೆ ಅನುಕೂಲವಾಗುತ್ತವೆ. ಅವುಗಳು ನಮಗೆ ವಿರುದ್ಧವಾಗಿದ್ದರೆ ಅದನ್ನು ಪ್ರಾಸಿಕ್ಯೂಷನ್‌ ಬಳಕೆ ಮಾಡಿಕೊಳ್ಳಬಹುದು. ನಾಲ್ಕು ಮತ್ತು ಐದನೇ ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಆರೋಪಗಳು ಇಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ಕೇಳಿರುವ ದಾಖಲೆಗಳನ್ನು ನ್ಯಾಯಾಲಯ ಪರಿಶೀಲಿಸಿದರೆ ವಿಚಾರ ತಿಳಿಯುತ್ತದೆ. ನಾವು ಕೇಳಿರುವ ದಾಖಲೆಗಳನ್ನು ಪ್ರಕರಣದ ಹೊರಗಿಟ್ಟು, ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದರೆ ನ್ಯಾಯದಾನ ಮಾಡಿದಂತಾಗುವುದಿಲ್ಲ” ಎಂದು ವಿವರಿಸಿದರು.

“ನಾವು ಕೋರಿರುವ ದಾಖಲೆಗಳು ಪ್ರಾಸಿಕ್ಯೂಷನ್‌ಗೆ ವಿರುದ್ಧವಾಗಿವೆ. ಹೀಗಾಗಿ, ಅವುಗಳನ್ನು ನ್ಯಾಯಾಲಯದ ಮುಂದೆ ಇಡಲು ಅವರು ಹಿಂದೆ ಸರಿಯುತ್ತಿದ್ದಾರೆ. ತನಿಖೆಯ ನೆಪವೊಡ್ಡಿ ಸತ್ಯ ಮುಚ್ಚಿಡಬಾರದು. ನಮ್ಮ ನಿರಪರಾಧಿತನವನ್ನು ಮೇಲ್ನೋಟಕ್ಕೆ ತೋರಿಸಲು ಇಂಥ ದಾಖಲೆ ಇದೆ ಎಂದು ನಾವು ಹೇಳಿದಾಗ, ಸಿಆರ್‌ಪಿಸಿ ಸೆಕ್ಷನ್‌ 91 ಬಳಸಿ ನ್ಯಾಯಾಲಯವು ನಮ್ಮ ನೆರವಿಗೆ ಧಾವಿಸಬೇಕು. ಹೀಗಾಗಿ, ನಮ್ಮ ಕೋರಿಕೆಯನ್ನು ಊರ್ಜಿತಗೊಳಿಸಿ, ದಾಖಲೆಗಳನ್ನು ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಆದೇಶಿಸಿಬೇಕು” ಎಂದು ಮನವಿ ಮಾಡಿದರು.

Also Read
ಪೋಕ್ಸೊ ಪ್ರಕರಣ: ಮೂರನೇ ಆರೋಪಿ ಬಸವಾದಿತ್ಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಚಿತ್ರದುರ್ಗದ ವಿಶೇಷ ನ್ಯಾಯಾಲಯ

ಈ ಮಧ್ಯೆ, ಸಂತ್ರಸ್ತ ಹೆಣ್ಣು ಮಕ್ಕಳ ಪರವಾಗಿ ವಕೀಲ ಶ್ರೀನಿವಾಸ್‌ ಅವರು ಲಿಖಿತ ಆಕ್ಷೇಪಣೆ ಸಲ್ಲಿಸಿದರು.

ಕಾಲಾವಕಾಶ ಕೊರತೆಯ ಹಿನ್ನೆಲೆಯಲ್ಲಿ ಮೊದಲ ಆರೋಪಿ ಶಿವಮೂರ್ತಿ ಮುರುಘಾ ಶರಣರು ಮತ್ತು ಎರಡನೇ ಆರೋಪಿ ಎಸ್‌ ರಶ್ಮಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್‌ 19ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com