ಮುರುಘಾ ಶರಣರ ವಿರುದ್ಧ ಮಾಧ್ಯಮಗಳಲ್ಲಿ ದೋಷಾರೋಪ ಪಟ್ಟಿ ಕುರಿತ ವರದಿ; ವಿವಾದಿತ ಅಂಶಗಳ ಖಚಿತ ಪಡಿಸದ ಅಧಿಕೃತ ಮೂಲಗಳು

“ನ್ಯಾಯಾಲಯವು ಕಚೇರಿ ತಕರಾರುಗಳನ್ನು ಸರಿಪಡಿಸುವಂತೆ ನನಗೆ ನಿರ್ದೇಶಿಸಿತ್ತು. ಆರೋಪ ಪಟ್ಟಿಯನ್ನು ನನ್ನಿಂದ ಪರಿಶೀಲನೆಗೆ ಒಳಪಡಿಸದೇ ನ್ಯಾಯಾಲಯಕ್ಕೆ ಸಲ್ಲಿಸಿರುವುದರಿಂದ ಕಚೇರಿ ಆಕ್ಷೇಪಣೆ ಸರಿಪಡಿಸಲಾಗದು” ಎಂದಿರುವ ಸರ್ಕಾರಿ ಅಭಿಯೋಜಕರು.
POCSO, Dr Sri Shivamurthy Murugha Sharanaru
POCSO, Dr Sri Shivamurthy Murugha Sharanaru

ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯಲ್ಲಿದೆ ಎನ್ನಲಾದ ವಿಷಯಗಳು ಸೋಮವಾರ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದವು. ಆದರೆ, ಇದರ ಬಗ್ಗೆ ಅಧಿಕೃತ ಸ್ಪಷ್ಟನೆ ಮಾತ್ರ ದೊರೆಯಲಿಲ್ಲ.

ವಿಪರ್ಯಾಸವೆಂದರೆ ಮುರುಘಾ ಶರಣರು ಹಾಗೂ ಇತರೆ ನಾಲ್ವರು ಆರೋಪಿಗಳು, ಅನುಯಾಯಿಗಳು, ಮುರುಘಾ ಮಠ ಮತ್ತು ಪದಾಧಿಕಾರಿಗಳ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ, ವಿವಾದಾತ್ಮಕ ವಿಚಾರ ಪ್ರಸಾರ, ಪ್ರಕಟ ಮಾಡದಂತೆ ವಿದ್ಯುನ್ಮಾನ, ಮುದ್ರಣ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಿ ನ್ಯಾಯಾಲಯವು ಈಚೆಗೆ ಮಧ್ಯಂತರ ಪ್ರತಿಬಂಧಕಾದೇಶ ಮಾಡಿರುವ ನಡುವೆಯೇ ಈ ಎಲ್ಲ ಬೆಳವಣಿಗೆಗಳು ನಡೆದಿವೆ.

ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಚರ್ಚಾರ್ಹ ದೋಷಾರೋಪ ಪಟ್ಟಿಯ ಕುರಿತು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತನಾಡಿರುವ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿಯಾಗಿರುವ ಕೆ ಬಿ ನಾಗವೇಣಿ ಅವರು “ತನಿಖಾಧಿಕಾರಿಯು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವಾಗ ನನ್ನಿಂದ ಪರಿಶೀಲನೆ (ಸ್ಕ್ರೂಟಿನಿ) ಮಾಡಿಸಿಲ್ಲ. ಈ ಕುರಿತು ನ್ಯಾಯಾಲಯವು ಕಚೇರಿ ತಕರಾರುಗಳನ್ನು ಸರಿಪಡಿಸುವಂತೆ ನನಗೆ ನಿರ್ದೇಶಿಸಿತ್ತು. ಆರೋಪ ಪಟ್ಟಿಯನ್ನು ನನ್ನಿಂದ ಪರಿಶೀಲನೆಗೆ ಒಳಪಡಿಸದೇ ನ್ಯಾಯಾಲಯಕ್ಕೆ ಸಲ್ಲಿಸಿರುವುದರಿಂದ ಕಚೇರಿ ಆಕ್ಷೇಪಣೆ ಸರಿಪಡಿಸಲಾಗದು ಎಂದು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದೇನೆ. ಈ ಕುರಿತು ತನಿಖಾಧಿಕಾರಿಯು ನ್ಯಾಯಾಲಯಕ್ಕೆ ಉತ್ತರಿಸಬೇಕಾಗುತ್ತದೆ. ಈ ನಡುವೆ ನ್ಯಾಯಾಲಯವು ಪ್ರಕರಣದ ಸಂಖ್ಯೆಯನ್ನು ನಿಗದಿಪಡಿಸಿಲ್ಲ. ನಾಲ್ಕು ದಿನಗಳ ಹಿಂದೆ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿಯು ನನಗೆ ನೀಡಿದ್ದು, ಅದನ್ನು ಇನ್ನಷ್ಟೇ ಅಧ್ಯಯನ ಮಾಡಬೇಕಿದೆ” ಎಂದು ತಿಳಿಸಿದರು. ಮಾಧ್ಯಮಗಳಲ್ಲಿ ದೋಷಾರೋಪಪಟ್ಟಿಯಲ್ಲಿದೆ ಎಂದು ಪ್ರಸ್ತಾಪಿಸಲಾಗುತ್ತಿರುವ ವರದಿಗಳಲ್ಲಿನ ಅಂಶಗಳ ಬಗ್ಗೆ ಖಚಿತ ಪಡಿಸಲು ನಿರಾಕರಿಸಿದರು.

ಈ ಮಧ್ಯೆ, ಮಾಧ್ಯಮಗಳಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮ ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ಕೆಲವು ಕಡೆ ಪೊಲೀಸರನ್ನು ಉಲ್ಲೇಖಿಸಿ, ಮತ್ತೆ ಕೆಲವು ಕಡೆ ಸುದ್ದಿಯ ಮೂಲವನ್ನು ಉಲ್ಲೇಖಿಸದೇ, ಆರೋಪ ಪಟ್ಟಿಯಲ್ಲಿ ಇದೆ ಎಂಬ ವಿಚಾರಗಳನ್ನು ಒಳಗೊಂಡ ವರದಿಗಳನ್ನು ಪ್ರಕಟಿಸಲಾಗಿದೆ. ದೋಷಾರೋಪ ಪಟ್ಟಿಯಲ್ಲಿದೆ ಎನ್ನಲಾದ ಮಾಧ್ಯಮಗಳಲ್ಲಿ ವರದಿಯಾಗಿರುವ ಅಂಶಗಳು ಇಂತಿವೆ:

  • ಮುರುಘಾ ಶರಣರು ಪ್ರತಿ ಭಾನುವಾರ ಮಕ್ಕಳನ್ನು ಕೋಣೆಗೆ ಕರೆಯಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಮಕ್ಕಳನ್ನು ಎರಡನೇ ಆರೋಪಿ ಎಸ್‌ ರಶ್ಮಿ ಅವರು ಕೋಣೆಗೆ ಕರೆದೊಯ್ದು ಬಿಡುತ್ತಿದ್ದರು. ಒಪ್ಪದವರಿಗೆ ಬೆದರಿಕೆ ಹಾಕಲಾಗುತ್ತಿತ್ತು. 10ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

  • ಮಕ್ಕಳಿಗೆ ಮಂಪರು ಬರುವ ಔಷಧ ನೀಡಿ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಕಚೇರಿ ಬೆಡ್‌ರೂಮ್‌, ಬಾತ್‌ ರೂಮ್‌ಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ.

  • ರಶ್ಮಿ ಅವರಿಗೆ ಇಂಥ ಮಕ್ಕಳನ್ನು ಕರೆತರುವಂತೆ ಶರಣರು ಬರೆದುಕೊಡುತ್ತಿದ್ದರು. ಮಕ್ಕಳ ಮನೆಯವರಿಗೆ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿ ಒಪ್ಪಿಸುತ್ತಿದ್ದರು. ಒಪ್ಪದಿದ್ದವರಿಗೆ ಬೆದರಿಕೆ ಹಾಕಲಾಗುತ್ತಿತ್ತು. 

  • ಶರಣರು ಹೇಳುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ರಶ್ಮಿ ಕಳುಹಿಸಿಕೊಡುತ್ತಿದ್ದರು. ಟ್ಯೂಷನ್‌ ಮಾಡುವುದಾಗಿ ಭಾನುವಾರ ಸಂಜೆ ವಿದ್ಯಾರ್ಥಿನಿಯರನ್ನು ಶರಣರು ಕರೆಯಿಸಿಕೊಳ್ಳುತ್ತಿದ್ದರು. ಟ್ಯೂಷನ್‌ ಮುಗಿದ ಬಳಿಕ ವಿದ್ಯಾರ್ಥಿನಿಯರನ್ನು ಅಲ್ಲೇ ಉಳಿಸಿಕೊಳ್ಳಲಾಗುತ್ತಿತ್ತು. ಕಸ ಹೊಡೆಯಬೇಕು ಎಂದು ವಿದ್ಯಾರ್ಥಿನಿಯರನ್ನು ಇರಿಸಿಕೊಳ್ಳುತ್ತಿದ್ದ ಶರಣರು.

  • ವಿದ್ಯಾರ್ಥಿನಿಯರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಹಣ್ಣು, ಒಣ ಹಣ್ಣುಗಳನ್ನು ನೀಡುತ್ತಿದ್ದ ಆರೋಪಿ ಆ ವೇಳೆ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಮುಟ್ಟುತ್ತಿದ್ದರು. ತಾನು ಬೆತ್ತಲಾಗಿ ವಿದ್ಯಾರ್ಥಿನಿಯರ ಸೊಂಟ ಮುಟ್ಟುತ್ತಿದ್ದರು. ತಮ್ಮ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಲಾಗಿದೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.

  • ಮದ್ಯ ಸೇವಿಸಿ ಶರಣರು ಅವಾಚ್ಯವಾಗಿ ನಿಂದನೆ ಮಾಡಿದ್ದಾರೆ. ಪ್ರತಿ ದಿನ ಇಂಥ ವಿದ್ಯಾರ್ಥಿನಿ ಕರೆತರಬೇಕು ಎಂದು ವಾರ್ಡನ್‌ ರಶ್ಮಿಗೆ ಹೆಸರು ಬರೆದು ಕಳುಹಿಸುತ್ತಿದ್ದ ಶರಣರು. ಬಾಲಕಿಯರು ಶರಣರ ಬಳಿ ಹೋಗಲು ಒಪ್ಪದಿದ್ದಾಗ ಅವಾಚ್ಯವಾಗಿ ನಿಂದನೆ ಮಾಡುತ್ತಿದ್ದರು. ಮನೆಯವರಿಗೆ ಸಹಾಯ ಮಾಡುವುದಾಗಿ ಹೇಳಿ, ಅತ್ಯಾಚಾರದ ಬಗ್ಗೆ ಬಾಯಿಬಿಡದಂತೆ ಬೆದರಿಕೆ ಹಾಕುತ್ತಿದ್ದರು.

  • ವಿದ್ಯಾರ್ಥಿನಿಯರಿಗೆ ಆರೋಪಿ ಶರಣರು ಮದ್ಯಪಾನ ಮಾಡಿಸುತ್ತಿದ್ದರು. ಇದಕ್ಕೆ ಆರೋಪಿಗಳಾದ ಗಂಗಾಧರ್‌, ಬಸವಾದಿತ್ಯ, ರಶ್ಮಿ, ಪರಮಶಿವಯ್ಯ ಅವರಿಂದ ಬೆಂಬಲ.

  • ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾರೆ ಎಂದು ಸಹ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವುದಾಗಿ ವರದಿ.

Also Read
ಮುರುಘಾ ಶ್ರೀ ಸೇರಿ ಆರೋಪಿಗಳ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟ, ಪ್ರಸಾರ ಮಾಡದಂತೆ 48 ಮಾಧ್ಯಮಗಳಿಗೆ ನಿರ್ಬಂಧ

Related Stories

No stories found.
Kannada Bar & Bench
kannada.barandbench.com