ಶಿವಮೂರ್ತಿ ಮುರುಘಾ ಶರಣರು ಸೇರಿ ನಾಲ್ವರ ಜಾಮೀನಿಗೆ ಸಂತ್ರಸ್ತೆಯರ ವಿರೋಧ; ನಾಳೆಗೆ ವಿಚಾರಣೆ ಮುಂದೂಡಿದ ನ್ಯಾಯಾಲಯ

ಮುರುಘಾ ಶರಣರಿಗೆ ಹೃದಯ ಸಂಬಂಧಿತ ಸಮಸ್ಯೆಗೆ ಚಿತ್ರದುರ್ಗ ಅಥವಾ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣೆ ನಡೆಸಿ, ವರದಿ ಸಲ್ಲಿಸುವಂತೆ ಚಿತ್ರದುರ್ಗ ಜೈಲು ಮೇಲ್ವಿಚಾರಣಾಧಿಕಾರಿಗೆ ನಿರ್ದೇಶಿಸಿದ ನ್ಯಾಯಾಲಯ.
Dr. Shivamurthy Murugha Sharanaru and Chitradurga District Court
Dr. Shivamurthy Murugha Sharanaru and Chitradurga District Court

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಮೊದಲನೇ ಆರೋಪಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಇತರೆ ಮೂವರು ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಸಂತ್ರಸ್ತ ಬಾಲಕಿಯರು ಖುದ್ದು ಹಾಜರಾಗಿ ಚಿತ್ರದುರ್ಗದ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಮನವಿ ಮಾಡಿದರು.

ಶಿವಮೂರ್ತಿ ಮುರುಘಾ ಶರಣರ ಜಾಮೀನು ಹಾಗೂ ಕ್ರಮವಾಗಿ ಮೂರರಿಂದ ಐದನೇ ಆರೋಪಿಗಳಾದ ಎಸ್‌ ಬಸವಾದಿತ್ಯ, ಎ ಜೆ ಪರಮಶಿವಯ್ಯ ಮತ್ತು ವಕೀಲ ಗಂಗಾಧರ ಅವರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರು ನಡೆಸಿದರು.

ಸಂತ್ರಸ್ತ ಬಾಲಕಿಯರ ಪರವಾಗಿ ವಕೀಲರಾದ ಶ್ರೀನಿವಾಸ್‌ ಮತ್ತು ಮುಕುಂದ್‌ ಅವರು ವಕಾಲತ್ತು ಹಾಕಿದ್ದಾರೆ. ನ್ಯಾಯಾಲಯದಲ್ಲಿ ಹಾಜರಿದ್ದ ಸಂತ್ರಸ್ತ ವಿದ್ಯಾರ್ಥಿನಿಯರು ಸರ್ಕಾರಿ ಅಭಿಯೋಜಕರಾದ ನಾಗವೇಣಿ ಅವರಿಗೆ ಕಾನೂನಿನ ಅನ್ವಯ ಜಾಮೀನಿಗೆ ವಿರೋಧ ದಾಖಲಿಸುವಂತೆ ಕೋರಿದರು. ಸರ್ಕಾರಿ ಅಭಿಯೋಜಕರ ಕೋರಿಕೆಯ ಹಿನ್ನೆಲೆಯಲ್ಲಿ ಪೀಠವು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ, ವಿಚಾರಣೆಯನ್ನು ನಾಳೆಗೆ ಮುಂದೂಡಿತು.

ನ್ಯಾಯಾಂಗ ಬಂಧನದಲ್ಲಿರುವ ಎರಡನೇ ಆರೋಪಿ ಹಾಗೂ ಅಕ್ಕಮಹಾದೇವಿ ಹಾಸ್ಟೆಲ್‌ ವಾರ್ಡನ್‌ ಎಸ್‌ ರಶ್ಮಿ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಆದೇಶಿಸಿರುವ ಪೀಠವು ವಿಚಾರಣೆಯನ್ನು ಸೆಪ್ಟೆಂಬರ್‌ 9ಕ್ಕೆ ಮುಂದೂಡಿದೆ. ಆರೋಪಿ ರಶ್ಮಿ ಅವರನ್ನು ವಕೀಲ ಡಿ ಎಂ ಬಸವರಾಜ್‌ ಪ್ರತಿನಿಧಿಸಿದ್ದಾರೆ. ಉಳಿದ ಆರೋಪಿಗಳನ್ನು ವಕೀಲ ಕೆ ಎನ್‌ ವಿಶ್ವನಾಥಯ್ಯ ಪ್ರತಿನಿಧಿಸಿದ್ದಾರೆ.

Also Read
ಪೋಕ್ಸೊ ಪ್ರಕರಣ: ಮುರುಘಾ ಶ್ರೀ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಸಂತ್ರಸ್ತರಿಗೆ ವಿಶೇಷ ನ್ಯಾಯಾಲಯದಿಂದ ನೋಟಿಸ್‌ ಜಾರಿ

ಪ್ರಾಥಮಿಕ ತಪಾಸಣೆ ನಡೆಸಿ ವರದಿ ಸಲ್ಲಿಸಲು ಆದೇಶ

ಮೊದಲ ಆರೋಪಿ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಹೃದಯ ಸಂಬಂಧಿತ ಸಮಸ್ಯೆಗೆ (ಆಂಜಿಯೊ ಕರೋನರಿ ಆಂಜಿಯೋಪ್ಲಾಸ್ಟ್‌) ಚಿತ್ರದುರ್ಗ ಅಥವಾ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣೆ ನಡೆಸಿ, ವರದಿ ಸಲ್ಲಿಸುವಂತೆ ಚಿತ್ರದುರ್ಗ ಜೈಲು ಮೇಲ್ವಿಚಾರಣಾಧಿಕಾರಿಗೆ ನ್ಯಾಯಾಲಯ ಬುಧವಾರ ನಿರ್ದೇಶಿಸಿದೆ.

ಸೆಪ್ಟೆಂಬರ್‌ 2ರಂದು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಶಿವಮೂರ್ತಿ ಮುರುಘಾ ಶರಣರು ಹೃದಯ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಗೆ ದಾಖಲಿಸಬೇಕು ಎಂದು ವೈದ್ಯರು ವರದಿ ನೀಡಿದ್ದಾರೆ ಎಂದು ಚಿತ್ರದುರ್ಗ ಜೈಲಿನ ಮೇಲ್ವಿಚಾರಕರು ನ್ಯಾಯಾಲಯಕ್ಕೆ ವೈದ್ಯಕೀಯ ದಾಖಲೆ ಸಲ್ಲಿಸಿದ್ದರು. ಇದನ್ನು ಆಧರಿಸಿ ಆರೋಪಿ ಸ್ವಾಮೀಜಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ದಾಖಲಿಸಿದ್ದರು.

Also Read
ಮುರುಘಾ ಶ್ರೀ ಸೇರಿ ಆರೋಪಿಗಳ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟ, ಪ್ರಸಾರ ಮಾಡದಂತೆ 48 ಮಾಧ್ಯಮಗಳಿಗೆ ನಿರ್ಬಂಧ

ಆರೋಪಿಯು ಸೆಪ್ಟೆಂಬರ್‌ 2ರಿಂದ 5ರವರೆಗೆ ಪೊಲೀಸ್‌ ಕಸ್ಟಡಿಯಲ್ಲಿದ್ದ ನಾಲ್ಕೂ ದಿನ ಅವರ ರಕ್ತದೊತ್ತಡ, ಸಕ್ಕರೆ ಪ್ರಮಾಣ ಮತ್ತು ಇಸಿಜಿ ಪರೀಕ್ಷೆ ಮಾಡಲಾಗಿದ್ದು, ವರದಿಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಆರೋಪಿಯ ಆರೋಗ್ಯವು ಸ್ಥಿರವಾಗಿದ್ದು, ಬೆಂಗಳೂರಿಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಆಕ್ಷೇಪಿಸಿದ್ದರು. ಇದನ್ನು ಪರಿಗಣಿಸಿದ ಪೀಠವು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣೆ ನಡೆಸಿ, ವರದಿ ಸಲ್ಲಿಸುವಂತೆ ಆದೇಶ ಮಾಡಿದೆ.

Related Stories

No stories found.
Kannada Bar & Bench
kannada.barandbench.com