ಮುರುಘಾ ಶ್ರೀ ನ್ಯಾಯಾಂಗ ಬಂಧನ ಸೆ.27ರವರೆಗೆ ವಿಸ್ತರಣೆ; ಬಸವಾದಿತ್ಯ ನಿರೀಕ್ಷಣಾ ಜಾಮೀನು ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಪ್ರಾಸಿಕ್ಯೂಷನ್‌ ಪರ ಸರ್ಕಾರಿ ಅಭಿಯೋಜಕರಾದ ನಾಗವೇಣಿ ಅವರು ವಾದ ಮಂಡಿಸಲು ಕಾಲಾವಕಾಶ ಕೋರಿದ್ದರಿಂದ ವಿಚಾರಣೆಯನ್ನು ಸೆಪ್ಟೆಂಬರ್‌ 16ಕ್ಕೆ ಮುಂದೂಡಲಾಗಿದೆ.
Murugha Sharanaru and Chitradurga court
Murugha Sharanaru and Chitradurga court

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರು ಮತ್ತು ಎರಡನೇ ಆರೋಪಿ ಅಕ್ಕ ಮಹಾದೇವಿ ಹಾಸ್ಟೆಲ್‌ ವಾರ್ಡನ್‌ನ ಎಸ್‌ ರಶ್ಮಿ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್‌ 27ರವರೆಗೆ ವಿಶೇಷ ನ್ಯಾಯಾಲಯವು ಬುಧವಾರ ವಿಸ್ತರಿಸಿದೆ.

ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಚಿತ್ರದುರ್ಗ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರ ಮುಂದೆ ಪೊಲೀಸರು ಹಾಜರುಪಡಿಸಿದರು. ಆರೋಪಿಗಳನ್ನು ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯವು ಆದೇಶಿಸಿತು.

ಇದೇ ಸಂದರ್ಭದಲ್ಲಿ ಮೊದಲ ಆರೋಪಿಯಾಗಿರುವ ಮುರುಘಾ ಶರಣರ ಜಾಮೀನಿಗೆ ಸಂಬಂಧಿಸಿದಂತೆ ವಕೀಲ ಸಂದೀಪ್‌ ಪಾಟೀಲ್‌ ಅವರು ಇಂದು ವಾದ ಮಂಡಿಸಿದರು.

“ಮಕ್ಕಳ ಮನಸ್ಸು ಕೆಡಿಸಿ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ. ತನಿಖಾಧಿಕಾರಿಗಳಿಗೆ ಸಾಕ್ಷ್ಯ ಸಂಗ್ರಹಿಸಲು ಸಮಯಬೇಕಾಗುತ್ತದೆ. ಈಗಾಗಲೇ ಸಂತ್ರಸ್ತ ಮಕ್ಕಳಿಂದ ಸಿಆರ್‌ಪಿಸಿ 164ರ ಅಡಿ ಹೇಳಿಕೆ ಪಡೆಯಲಾಗಿದೆ. ಬೆಂಗಳೂರಿನ ಕಾಟನ್‌ ಪೇಟೆ ಠಾಣೆಯಿಂದ ದಾಖಲೆ ಬರಬೇಕಿದೆ. ಮೈಸೂರಿನ ನಜರಾಬಾದ್‌ ಠಾಣೆಯಿಂದ ದಾಖಲೆಗಳು ಬಂದಿವೆ. ಸಾಂದರ್ಭಿಕ ಸಾಕ್ಷ್ಯಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಬಹುದಾಗಿದೆ” ಎಂದರು.

“ಮಠದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಮಂದಿಗೆ ಚೆಕ್‌ಗಳ ಮೂಲಕ ಸ್ವಾಮೀಜಿಯವರು ವೇತನ ಪಾವತಿಸಬೇಕು. ಸ್ವಾಮೀಜಿ ಅವರು ಹಲವು ಸಂಸ್ಥೆಗಳ ಮೇಲೆ ನಿಗಾ ಮಾಡಬೇಕಿದೆ. ತನಿಖೆಯ ನೆಪದಲ್ಲಿ ದೀರ್ಘಕಾಲ ಅವರನ್ನು ಜೈಲಿನಲ್ಲಿಡುವುದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಸ್ವಾಮೀಜಿ ಅವರನ್ನು ಹೇಗಾದರೂ ಮಾಡಿ ಪದಚ್ಯುತಗೊಳಿಸಬೇಕು ಎಂಬ ಉದ್ದೇಶದಿಂದ ಹುನ್ನಾರ ನಡೆಸಲಾಗಿದೆ” ಎಂದು ವಾದಿಸಿದರು.

“ಪ್ರಕರಣ ದಾಖಲಿಸುವುದು ತಡವಾಗಿದೆ. ಇಲ್ಲಿ ಪಿತೂರಿ ನಡೆದಿದ್ದು, ಆರೋಪಿ ಸ್ವಾಮೀಜಿಗೆ ವಯಸ್ಸಾಗಿದೆ. ದಸರಾ ಸಂದರ್ಭದಲ್ಲಿ ಮಠದಲ್ಲಿ ಶರಣೋತ್ಸವ ನಡೆಸಲಾಗುತ್ತದೆ. ಶ್ರೀಗಳನ್ನು ಜೈಲಿನಲ್ಲಿಡುವುದರಿಂದ ಇದಕ್ಕೆ ಅಡ್ಡಿಯಾಗುತ್ತದೆ” ಎಂದು ಆಕ್ಷೇಪಿಸಲಾಗಿದೆ.

Also Read
ಶಿವಮೂರ್ತಿ ಮುರುಘಾ ಶರಣರು ಸೇರಿ ನಾಲ್ವರ ಜಾಮೀನಿಗೆ ಸಂತ್ರಸ್ತೆಯರ ವಿರೋಧ; ನಾಳೆಗೆ ವಿಚಾರಣೆ ಮುಂದೂಡಿದ ನ್ಯಾಯಾಲಯ

ಪ್ರಾಸಿಕ್ಯೂಷನ್‌ ಪರ ಸರ್ಕಾರಿ ಅಭಿಯೋಜಕರಾದ ನಾಗವೇಣಿ ಅವರು ವಾದ ಮಂಡಿಸಲು ಕಾಲಾವಕಾಶ ಕೋರಿದ್ದರಿಂದ ವಿಚಾರಣೆಯನ್ನು ಸೆಪ್ಟೆಂಬರ್‌ 16ಕ್ಕೆ ಮುಂದೂಡಲಾಗಿದೆ.

ತೀರ್ಪು ಕಾಯ್ದಿಸಿರುವ ಪೀಠ: ಮೂರನೇ ಆರೋಪಿ ಬಸವಾದಿತ್ಯ ಅವರ ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದಂತೆ ವಾದ-ಪ್ರತಿವಾದ ಪೂರ್ಣಗೊಂಡಿದ್ದು, ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ನಾಳೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

Related Stories

No stories found.
Kannada Bar & Bench
kannada.barandbench.com