Lawyer with sword
Lawyer with sword

ನ್ಯಾಯವಾದಿಗಳ ಮೇಲೆ ವಕೀಲನಿಂದ ದಾಳಿ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪಂಜಾಬ್ ಹೈಕೋರ್ಟ್

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಚಂಡೀಗಢ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
Published on

ಇತ್ತೀಚೆಗೆ ವಕೀಲರೊಬ್ಬರು ನ್ಯಾಯಾಲಯದ ಆವರಣದೊಳಗೆ ಕತ್ತಿ ಝಳಪಿಸಿ ನ್ಯಾಯವಾದಿಗಳ ಮೇಲೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಮತ್ತೊಂದೆಡೆ ತನ್ನ ಕಾರ್ಯದರ್ಶಿ ಮತ್ತು ವಕೀಲರ ಮೇಲೆ ದಾಳಿ ನಡೆದಿರುವುದಾಗಿ ಆರೋಪಿಸಿರುವ ಹೈಕೋರ್ಟ್‌ ವಕೀಲರ ಸಂಘ ಕೃತ್ಯ ನಡೆಸಿದ ಆರೋಪ ಹೊತ್ತ ವಕೀಲರಾದ ರವನೀತ್ ಕೌರ್ ಮತ್ತು ಸಿಮ್ರನ್‌ಜಿತ್‌ ಸಿಂಗ್ ಬ್ಲಸ್ಸಿ ಅವರಿಗೆ ನೀಡಲಾಗಿರುವ ವಕೀಲಿಕೆ ಪರವಾನಗಿಯನ್ನು ರದ್ದುಗೊಳಿಸಿತ್ತು.

Also Read
ವಕೀಲರ ಮೇಲೆ ಹಲ್ಲೆ: ವಕೀಲರ ಸುರಕ್ಷತಾ ಕಾಯಿದೆ ಜಾರಿಗೆ ತರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಎಎಬಿ

ಸಂಘದ ಮನವಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸಂಜೀವ್ ಬೆರ್ರಿ ಅವರಿದ್ದ ವಿಭಾಗೀಯ ಪೀಠ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಆದೇಶಿಸಿತು. ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಚಂಡೀಗಢ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.

ವಕೀಲರನ್ನು ಬೆದರಿಸಲು ಮತ್ತು ವಕೀಲೆಯೊಬ್ಬರ ಮೇಲೆ ದಾಳಿ ಮಾಡಲು ಕೌರ್‌ ಅವರು ಸೆಪ್ಟೆಂಬರ್ 17ರಂದು ಬ್ಲಸ್ಸಿ ಅವರನ್ನು ಪ್ರಚೋದಿಸಿದ್ದರು ಎಂದು ಸಂಘ ದೂರಿತ್ತು. ಇಬ್ಬರ ವಿರುದ್ಧ ಎಫ್‌ಐಆ ದಾಖಲಿಸಿದ್ದರೂ ಬ್ಲಸ್ಸಿ ಅವರನ್ನು ಮಾತ್ರ ಬಂಧಿಸಲಾಗಿದೆ. ಆದರೆ ಕೌರ್‌ ಅವರನ್ನೂ ಬಂಧಿಸಬೇಕು ಎಂದು ಅದು ಕೋರಿತು.

ಅಲ್ಲದೆ ಕೌರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಮಾನಹಾನಿಕರ ಹೇಳಿಕೆಯನ್ನು ತೆಗೆದುಹಾಕಿ ಅವರ ವಿರುದ್ಧ ಪ್ರತಿಬಂಧಕಾದೇಶ ನೀಡುವಂತೆ ಮನವಿ ಮಾಡಿತ್ತು.

ಚಂಢೀಗಢ ಕೇಂದ್ರಾಡಳಿತ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಮಿತ್‌ ಝಂಜಿ ಮತ್ತು ಸಂಘದ ಅಧ್ಯಕ್ಷ ಸರ್ತೇಜ್‌ ಸಿಂಗ್‌ ನರೂಲಾ ಅವರ ವಾದ ಆಲಿಸಿದ ನ್ಯಾಯಾಲಯ ಬ್ಲಸ್ಸಿ ಅವರ ದೂರು ಆಧರಿಸಿ ಯಾವುದೇ ಕ್ರಮ ಕೈಗೊಳ್ಳಬಾರದು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕೌರ್‌ ಅವರು ಪ್ರಕಟಿಸಿದ್ದ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಅದು ಆದೇಶಿಸಿತು.

Also Read
ಬಿಸಿಐ ಉಪಾಧ್ಯಕ್ಷ ಸದಾಶಿವ ರೆಡ್ಡಿ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು; ಕೃತ್ಯ ಖಂಡಿಸಿದ ಬಿಸಿಐ

ಸಂಘದ ಕಾರ್ಯದರ್ಶಿ ಗಗನ್‌ದೀಪ್‌ ಜಮ್ಮು ಅವರು ತಮ್ಮ ಲ್ಯಾಪ್‌ಟಾಪ್‌ ಕಸಿದುಕೊಂಡಿದ್ದಾರೆ ಎಂದು ಬುಧವಾರ ಕೌರ್‌ ಅವರು ನ್ಯಾಯಾಲಯದೆದುರು ದೂರಿದ್ದರು. ಆದರೆ ಕೂಡಲೇ ಈ ವಿಚಾರವಾಗಿ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಾಲಯ ನಿಯಮಾನುಸಾರ ಅರ್ಜಿ ಸಲ್ಲಿಸುವಂತೆ ತಾಕೀತು ಮಾಡಿತು. ಆದರೂ ಹಿರಿಯ ನ್ಯಾಯವಾದಿಗಳಾದ ಝಂಜಿ ಅವರು ಈ ವಿಚಾರವನ್ನು ಇತ್ಯರ್ಥಪಡಿಸುವಂತೆ ನ್ಯಾ. ನಾಗು ಹೇಳಿದರು.

ಈ ಬೆಳವಣಿಗೆಗಳ ಬಳಿಕ ಸಂಘ ಪ್ರಕಟಣೆ ಹೊರಡಿಸಿದ್ದು ಕೌರ್‌ ಆರೋಪಗಳು ಸತ್ಯಕ್ಕೆ ದೂರವಾದವು. ಕೌರ್ ಮತ್ತು ಬ್ಲಸ್ಸಿ ಕಚೇರಿಗೆ ನುಗ್ಗಿ ಕಾರ್ಯದರ್ಶಿ ಹಾಗೂ ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ವಕೀಲರಲ್ಲಿ ಭೀತಿ ಮತ್ತು ಗೊಂದಲದ ವಾತಾವರಣ. ಮೂಡಿಸಿದ್ದಾರೆ. ಇಬ್ಬರನ್ನೂ ಪೊಲೀಸರು ಕಡೆಗೆ ಕರೆದೊಯ್ದರು ಎಂದು ವಿವರಿಸಿದೆ.

Kannada Bar & Bench
kannada.barandbench.com