ಮಾನನಷ್ಟ ಮೊಕದ್ದಮೆ: ದೋಷಿ ಎಂದಿರುವ ನ್ಯಾಯಾಲಯದ ತೀರ್ಪು ಪ್ರಶ್ನಿಸಿದ ರಾಹುಲ್; ಏ.13ರ ವರೆಗೆ ಜಾಮೀನು ವಿಸ್ತರಣೆ

ಪ್ರಕರಣದಲ್ಲಿ ಗಾಂಧಿ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸೆಷನ್ಸ್ ನ್ಯಾಯಾಲಯ ಸೋಮವಾರ ಏಪ್ರಿಲ್ 13ಕ್ಕೆ ವಿಸ್ತರಿಸಿದ್ದು, ಅಂದು ಅವರ ಮನವಿಯ ವಿಚಾರಣೆ ನಡೆಯಲಿದೆ.
Rahul Gandhi
Rahul Gandhi Facebook
Published on

'ಮೋದಿ' ಸಮುದಾಯವನ್ನು ಅವಹೇಳನ ಮಾಡಿದ ಆರೋಪದ ಮೇಲೆ ತಮ್ಮ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ  ತಮ್ಮನ್ನು ದೋಷಿ ಎಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ನೀಡಿರುವ ತೀರ್ಪು ಹಾಗೂ ವಿಧಿಸಲಾಗಿರುವ ಶಿಕ್ಷೆಯನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂರತ್‌ನ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಹುಲ್‌ ಅವರಿಗೆ ನೀಡಿದ್ದ ಜಾಮೀನನ್ನು ಸೋಮವಾರ ಸೆಷನ್ಸ್ ನ್ಯಾಯಾಲಯ ಏಪ್ರಿಲ್ 13ರ ವರೆಗೆ ವಿಸ್ತರಿಸಿತು, ಅಂದು ಅವರ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.

Also Read
ಪ್ರಧಾನಿ ಮೋದಿ ಅವಮಾನಿಸಿದ ಪ್ರಕರಣ: ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮಾರ್ಚ್ 23 ರಂದು ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡುತ್ತಿದ್ದಂತೆಯೇ ಕೇರಳದ ವಯನಾಡ್‌ನ ಸಂಸದರಾಗಿದ್ದ ರಾಹುಲ್‌ ಅವರನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.

ಕರ್ನಾಟಕದ ಕೋಲಾರದಲ್ಲಿ 2019ರಲ್ಲಿ ನಡೆದ ರಾಜಕೀಯ ಸಮಾವೇಶವೊಂದರಲ್ಲಿ ರಾಹುಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀರವ್‌ ಮೋದಿ, ಲಲಿತ್‌ ಮೋದಿ ಅವರಂತಹ ದೇಶಬಿಟ್ಟು ಪರಾರಿಯಾದ ವ್ಯಕ್ತಿಗಳೊಂದಿಗೆ ಹೋಲಿಸಿದ್ದರು. "ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿಯೇ ಇರಲಿ, ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಏಕೆ ಇದೆ?" ಎಂದು ಅವರು ಪ್ರಶ್ನಿಸಿದ್ದರು.

Also Read
ಮೋದಿ ಉಪನಾಮ ವಿವಾದ: ಸುಶೀಲ್ ಕುಮಾರ್ ಮೊಕದ್ದಮೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಪಾಟ್ನಾ ನ್ಯಾಯಾಲಯದ ಸಮನ್ಸ್

ಈ ಹೇಳಿಕೆಯ ಮೂಲಕ 'ಮೋದಿ' ಉಪನಾಮ ಹೊಂದಿರುವ ಎಲ್ಲ ವ್ಯಕ್ತಿಗಳನ್ನು ರಾಹುಲ್‌ ದೂಷಿಸಿದ್ದಾರೆ ಎಂದು ಗುಜರಾತ್‌ನ ಬಿಜೆಪಿ ಮಾಜಿ ಶಾಸಕ ಪೂರ್ಣೇಶ್ ಮೋದಿ ರಾಹುಲ್‌ ವಿರುದ್ಧ ಸೂರತ್‌ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ತಮ್ಮ ಭಾಷಣದ ಮೂಲಕ ರಾಹುಲ್‌ ಅವರು ಉದ್ದೇಶಪೂರ್ವಕವಾಗ ಮೋದಿ ಉಪನಾಮ ಇರುವ ಜನರನ್ನು ಅಪಮಾನಿಸಿದ್ದಾರೆ ಎಂಬ ಪೂರ್ಣೇಶ್‌ ವಾದವನ್ನು ಸೂರತ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಪುರಸ್ಕರಿಸಿತ್ತು.

Also Read
ಮೋದಿ ಕುರಿತ ಸಾಕ್ಷ್ಯಚಿತ್ರ ನಿಷೇಧ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಭೂಷಣ್, ಮಹುವಾ, ಎನ್ ರಾಮ್ ಅರ್ಜಿಯಲ್ಲೇನಿದೆ?

ರಾಹುಲ್‌ ಸಂಸತ್ತಿನ ಸದಸ್ಯರಾಗಿರುವುದರಿಂದ ಅವರು ಏನು ಹೇಳಿದರೂ ಅದು ಹೆಚ್ಚಿನ ಪರಿಣಾಮ ಬೀರುತ್ತದೆ ಹೀಗಾಗಿ ಅವರು ಸಂಯಮ ತೋರಬೇಕಿತ್ತು ಎಂದು ತಮ್ಮ 168 ಪುಟಗಳ ತೀರ್ಪಿನಲ್ಲಿ, ನ್ಯಾಯಾಧೀಶ ಹದಿರಾಶ್ ವರ್ಮಾ ಅವರು ಹೇಳಿದ್ದರು.

"ಆರೋಪಿ (ರಾಹುಲ್‌) ತಮ್ಮ ರಾಜಕೀಯ ಲಾಲಸೆಗಾಗಿ ಹಾಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಉಪನಾಮವನ್ನು ಪ್ರಸ್ತಾಪಿಸಿ  'ಮೋದಿ' ಎಂಬ ಉಪನಾಮ ಇರುವ ಭಾರತದಲ್ಲಿ ವಾಸಿಸುವ 13 ಕೋಟಿ ಜನರನ್ನು ಅವಮಾನಿಸಿ ಮಾನಹಾನಿಗೊಳಿಸಿದ್ದಾರೆ" ಎಂದು ನ್ಯಾಯಾಧೀಶರು ಹೇಳಿದ್ದರು.

Kannada Bar & Bench
kannada.barandbench.com