ಶಬರಿಮಲೆ: ಅಮೂಲ್ಯ ವಸ್ತುಗಳ ವಿವರ ಸಂಗ್ರಹಕ್ಕಾಗಿ ನಿವೃತ್ತ ನ್ಯಾಯಾಧೀಶರ ನೇಮಕಕ್ಕೆ ಕೇರಳ ಹೈಕೋರ್ಟ್ ಸೂಚನೆ

ಶಬರಿಮಲೆ ದೇವಸ್ಥಾನದಲ್ಲಿ 'ದ್ವಾರಪಾಲಕ ಮೂರ್ತಿಯ ಚಿನ್ನ ಲೇಪಿತ ತಾಮ್ರದ ಪೀಠ ಕಾಣೆಯಾಗಿದ್ದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
Sabarimala Temple
Sabarimala Temple
Published on

ಶಬರಿಮಲೆ ದೇವಸ್ಥಾನದಲ್ಲಿರುವ ಎಲ್ಲಾ ಬೆಲೆಬಾಳುವ ವಸ್ತುಗಳ ಸರಿಯಾದ, ನಿಖರವಾದ ವಿವರ ಸಿದ್ಧಪಡಿಸುವ ಸಮಯ ಬಂದಿದ್ದು ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿ ಎಂದು ಕೇರಳ ಹೈಕೋರ್ಟ್ ಸೋಮವಾರ ಸೂಚಿಸಿದೆ [ಸ್ವಯಂ ಪ್ರೇರಿತ ಪ್ರಕರಣ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಶಬರಿಮಲೆ ದೇವಸ್ಥಾನದಲ್ಲಿ 'ದ್ವಾರಪಾಲಕ ಮೂರ್ತಿಯ ಚಿನ್ನ ಲೇಪಿತ ತಾಮ್ರದ ಪೀಠ ಕಾಣೆಯಾಗಿದ್ದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನ್ಯಾಯಮೂರ್ತಿ ರಾಜಾ ವಿಜಯರಾಘವನ್ ವಿ ಮತ್ತು ನ್ಯಾಯಮೂರ್ತಿ ಕೆ ವಿ ಜಯಕುಮಾರ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.

Also Read
ವಿಶ್ವ ಅಯ್ಯಪ್ಪ ಸಂಗಮ ಅಬಾಧಿತ: ಶಬರಿಮಲೆ ದೇವಸ್ಥಾನದ ಪಾವಿತ್ರ್ಯ, ಭಕ್ತರ ಹಕ್ಕು ರಕ್ಷಿಸುವಂತೆ ಕೇರಳ ಹೈಕೋರ್ಟ್ ಆದೇಶ

ದೇವಸ್ಥಾನದಲ್ಲಿನ ಬೆಲೆಬಾಳುವ ವಸ್ತುಗಳ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಬಳಿ ಇರುವ ದಾಖಲೆಗಳಲ್ಲಿ ವ್ಯತ್ಯಾಸ ಇರುವ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.

 “ಭಕ್ತರು ದೇವರಿಗೆ ಅರ್ಪಿಸುವ ಬೆಲೆಬಾಳುವ ವಸ್ತುಗಳು ಇನ್ನಿತರ ದ್ರವ್ಯಗಳ ಬಗ್ಗೆ ಹೆಚ್ಚು ನಿಖರವಾದ ದಾಖಲೆ ಇಟ್ಟುಕೊಳ್ಳುವಂತೆ ಮಾಡಲು ಇದು ಸಕಾಲ ಎಂದು ಭಾವಿಸುತ್ತೇವೆ. ಮೌಲ್ಯಮಾಪಕರ ಸಹಾಯದಿಂದ ಭದ್ರತಾ ಕೋಣೆಯಲ್ಲಿರುವ ವಸ್ತುಗಳು ಮತ್ತು ತಿರುವಾಭರಣದ (ಪವಿತ್ರ ಆಭರಣ) ಮೌಲ್ಯಮಾಪನ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಧೀಶರನ್ನು ನೇಮಿಸುವ ಸಮಯ ಇದಾಗಿದೆ. ಪೀಠದ ದುರಸ್ತಿಯ ಪ್ರಾಯೋಜಕತ್ವ ವಹಿಸಿಕೊಂಡವರಿಗೆ ಬೆಲೆಬಾಳುವ ವಸ್ತುಗಳ ಹಸ್ತಾಂತರ ಮಾಡಿದ್ದು ಅದನ್ನು ಹಿಂತಿರುಗಿಸಲಾಗಿದೆಯೇ, ಅದರ ಮೌಲ್ಯ ಎಷ್ಟು ಎಂಬ ವಿವಿಧ ಸಂಗತಿಗಳನ್ನು ದೇವಸ್ವಂ ಮಂಡಳಿ ನಿರ್ವಹಿಸುತ್ತಿರುವ ನೋಂದಣಿ ಪುಸ್ತಕಗಳು ಬಹಿರಂಗಪಡಿಸದ ಕಾರಣ ನಾವು ಈ ನಿರ್ದೇಶನ  ನೀಡಬೇಕಾಗಿದೆ" ಎಂದು ನ್ಯಾಯಾಲಯ ವಿವರಿಸಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರ ಹೆಸರನ್ನು ನ್ಯಾಯಾಲಯ ಇನ್ನೂ ಅಂತಿಮಗೊಳಿಸಿಲ್ಲ.

ದ್ವಾರಪಾಲಕ ವಿಗ್ರಹಗಳ  ಚಿನ್ನ ಲೇಪಿತ ತಾಮ್ರದ ಮೂರ್ತಿಗಳನ್ನು ನ್ಯಾಯಾಲಯ ಅಥವಾ ಶಬರಿಮಲೆಯ ವಿಶೇಷ ಆಯುಕ್ತರಿಗೆ ತಿಳಿಸಿದೆಯೇ ದುರಸ್ತಿಗಾಗಿ ಕಳುಹಿಸಲಾಗಿತ್ತು. ಆಗ ಸ್ವಲ್ಪ ಪ್ರಮಾಣದ ಚಿನ್ನ ಕಳೆದುಹೋಗಿದೆ ಎಂಬ ಕಳವಳಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ  ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿತ್ತು.

ಮೂರ್ತಿಯ ಹೊದಿಕೆಗಳನ್ನು ತೆಗೆದಿದಿದ್ದ ಟಿಡಿಬಿ, ಉನ್ನಿಕೃಷ್ಣನ್ ಪೊಟ್ಟಿ ಎಂಬ ಭಕ್ತರ ಪ್ರಾಯೋಜಕತ್ವದಡಿಯಲ್ಲಿ ದುರಸ್ತಿ ಕಾರ್ಯಗಳಿಗಾಗಿ ಚೆನ್ನೈ ಮೂಲದ 'ಸ್ಮಾರ್ಟ್ ಕ್ರಿಯೇಷನ್ಸ್' ಎಂಬ ಸಂಸ್ಥೆಗೆ ವಹಿಸಿತ್ತು.

ಸ್ಮಾರ್ಟ್ ಕ್ರಿಯೇಷನ್ಸ್‌ಗೆ 42.8 ಕೆಜಿ ತೂಕದ ವಸ್ತು ಹಸ್ತಾಂತರಿಸಲಾಗಿದ್ದರೂ ಕೇವಲ 38 ಕೆಜಿ ತೂಕದ ವಸ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದು ದಾಖಲಿಸಲಾಗಿತ್ತು. ಸುಮಾರು 4.54 ಕೆಜಿ ವ್ಯತ್ಯಾಸ ಇದ್ದುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಸೆಪ್ಟೆಂಬರ್ 17 ರಂದು ನ್ಯಾಯಾಲಯ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಮುಖ್ಯ  ವಿಚಕ್ಷಣಾ ಅಧಿಕಾರಿ ಇಂದು ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸಿದರು.

ಉನ್ನಿಕೃಷ್ಣನ್ ಪೊಟ್ಟಿಯವರ ಸಹೋದರಿ ಮಿನಿಯವರ ಮನೆಯಲ್ಲಿ ಕೆಲವು ಚಿನ್ನ ಲೇಪಿತ ಪೀಠಗಳನ್ನು ಬಚ್ಚಿಟ್ಟಿರುವ ವಿಚಾರ ವರದಿಯಲ್ಲಿ ಇದ್ದು , ಶೋಧದ ಸಮಯದಲ್ಲಿ ಜಾಗೃತ ದಳವು ಅವುಗಳನ್ನು ವಶಪಡಿಸಿಕೊಂಡಿರುವುದು ತಿಳಿದುಬಂದಿದೆ.

ಪೊಟ್ಟಿ ಅವರಿಗೆ ಔಪಚಾರಿಕವಾಗಿ ಅಂತಹ ವಸ್ತುಗಳನ್ನು ನೀಡಲಾಗಿತ್ತು ಎಂಬ ದಾಖಲೆ ಟಿಡಿಬಿ ಬಳಿ ಇಲ್ಲದಿರಿವುದರಿಂದ ಈ ವಿಚಾರ ಕಳವಳಕಾರಿ ಎಂದು ನ್ಯಾಯಾಲಯ ನುಡಿಯಿತು.

Also Read
ಶಬರಿಮಲೆ ಬಳಿ ಸುರಿಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ವನ್ಯಜೀವಿಗಳ ಪಾಲಿಗೆ ದುರಂತವಾಗಲಿದೆ: ಕೇರಳ ಹೈಕೋರ್ಟ್

ತನಿಖೆ ಮುಂದುವರೆಸುವಂತೆ ಹಾಗೂ ಗೌಪ್ಯತೆ ಕಾಯ್ದುಕೊಳ್ಳುವಂತೆ ಟಿಡಿಬಿಯ ಮುಖ್ಯ ವಿಚಕ್ಷಣಾ ಮತ್ತು ಭದ್ರತಾ ಅಧಿಕಾರಿ (ಪೊಲೀಸ್‌ ವರಿಷ್ಠಾಧಿಕಾರಿ) ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿತು. ದೇವಸ್ವಂ ಮಂಡಳಿಯ ಅಧಿಕಾರಿಗಳಿಗೆ ಕೂಡ ಮಾಹಿತಿ ಬಹಿರಂಗೊಳಿಸದೆ ತನಿಖೆ ಮುಂದುವರೆಸಬೇಕು ಎಂದು ಅದು ಹೇಳಿದೆ.

ಗಮನಾರ್ಹ ಅಂಶವೆಂದರೆ, ತಿರುವಾಭರಣಂ ಡೈರಿ ಸೇರಿದಂತೆ ವಿವಿಧ ರೆಜಿಸ್ಟರ್‌ಗಳಲ್ಲಿ ವಿವರಗಳು ನಾಪತ್ತೆಯಾಗಿರುವುದರ ಬಗ್ಗೆಯೂ ವಿಚಕ್ಷಣಾ ವರದಿ ಗಮನ ಸೆಳೆದಿದ್ದರಿಂದ ದೇವಾಲಯದ ಸ್ಟ್ರಾಂಗ್ ರೂಮಿನಲ್ಲಿ ಇರಿಸಲಾಗಿರುವ ಎಲ್ಲಾ ಬೆಲೆಬಾಳುವ ವಸ್ತುಗಳ ಸರಿಯಾದ ಲೆಕ್ಕಪತ್ರ ತಯಾರಿಸಬೇಕಿದೆ ಎಂದ ನ್ಯಾಯಾಲಯ ಈ ಕಾರ್ಯಕ್ಕಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇಮಕಕ್ಕೆ ಸೂಚಿಸಿತು. ದ್ವಾರಪಾಲಕ ವಿಗ್ರಹಗಳ ಮೇಲೆ ದುರಸ್ತಿ ಮಾಡಿದ ಚಿನ್ನದ ಹೊದಿಕೆಗಳನ್ನು ಮರುಸ್ಥಾಪಿಸಲು ನ್ಯಾಯಾಲಯ ಇದೇ ವೇಳೆ ಸೂಚಿಸಿತು.

Kannada Bar & Bench
kannada.barandbench.com