ಹಿರಿಯ ವಕೀಲರು ಸಂದರ್ಶನದ ಮೂಲಕ ಕಿರಿಯ ವಕೀಲರನ್ನು ನೇಮಿಸಿಕೊಳ್ಳಬೇಕು, ಪರಿಚಿತ ಸಂಪರ್ಕಗಳಿಂದಲ್ಲ: ಸಿಜೆಐ

ಇದರಿಂದಾಗಿ ವಕೀಲ ಸಮುದಾಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟ ಸಿಜೆಐ ಡಿ ವೈ ಚಂದ್ರಚೂಡ್‌.
Woman lawyer
Woman lawyer Image for representative purpose
Published on

ತಮಗೆ ಪರಿಚಿತ ವಲಯದ ಸಂಪರ್ಕ ಜಾಲಗಳ ಮೂಲಕ ಕಿರಿಯ ವಕೀಲರನ್ನು ನೇಮಿಸಿಕೊಳ್ಳುವುದನ್ನು ಹಿರಿಯ ವಕೀಲರು ಬಿಡಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶುಕ್ರವಾರ ಹೇಳಿದ್ದಾರೆ.

ಬದಲಿಗೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದಕ್ಕಾಗಿ ಅರ್ಜಿ, ಸಂದರ್ಶನದಂತಹ ಆಯ್ಕೆ ವಿಧಾನವನ್ನು ಅವರು ಕಂಡುಕೊಳ್ಳಬೇಕು. ಇದರಿಂದ ವಕೀಲ ಸಮುದಾಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಲಿದೆ ಎಂದು ಅವರು ಹೇಳಿದರು.

ನಾಳೆ (ಸೆಪ್ಟೆಂಬರ್ 1) ನಿವೃತ್ತರಾಗಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿಗೆ ಸರ್ವೋಚ್ಚ ನ್ಯಾಯಾಲಯ ವಕೀಲರ ಸಂಘ (ಎಸ್‌ಸಿಬಿಎ) ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

Also Read
ಕಾನೂನು ಸಂಸ್ಥೆಗಳ ವಕೀಲೆಯರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಿಸುವಂತೆ ಕೊಲಿಜಿಯಂಗೆ ಕಪಿಲ್ ಸಿಬಲ್ ಒತ್ತಾಯ

ಸಿಜೆಐ ಭಾಷಣದ ಪ್ರಮುಖಾಂಶಗಳು

ಸಮಾನ ಅವಕಾಶ ಒದಗಿಸಿದ ಯಾವುದೇ ಕ್ಷೇತ್ರದಲ್ಲಿ ಮಹಿಳೆ ಉತ್ತಮ ಸಾಧನೆ ಮಾಡಿದ್ದಾರೆ, ನ್ಯಾಯಾಂಗವೂ ಇದಕ್ಕೆ ಹೊರತಲ್ಲ.

ವಕೀಲ ವೃತ್ತಿಯ ಸಮಸ್ಯೆ ಎಂದರೆ ಅಲ್ಲಿ ಸಮಾನ ಅವಕಾಶ ಇಲ್ಲದಿರುವುದು. ಸಂಪರ್ಕ ಜಾಲ, ಸ್ನೇಹಿತರ ಮಕ್ಕಳು ಮುಂತಾದವರನ್ನೇ ಹಿರಿಯ ವಕೀಲರ ಕಚೇರಿಗಳಿಗೆ ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸುವಂತೆ ಹಿರಿಯ ವಕೀಲರಲ್ಲಿ ಕೇಳಿಕೊಳ್ಳುತ್ತಿದ್ದೇನೆ.

ಅರ್ಜಿ, ಸಂದರ್ಶನಗಳ ಮೂಲಕ ನೇಮಕ ಮಾಡಿಕೊಳ್ಳುವ ಹಿರಿಯ ವಕೀಲರ ಪಟ್ಟಿಯನ್ನು ಎಸ್‌ಸಿಬಿಎ ನೀಡುವಂತಾಗಲಿ .

ನ್ಯಾಯಮೂರ್ತಿ ಕೊಹ್ಲಿ ಅವರ ಸೂಕ್ಷ್ಮತೆ, ಅವರು ನೀಡಿದ ಘನ ತೀರ್ಪುಗಳು ಹಾಗೂ ವಕೀಲ ವೃತ್ತಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರು ದೃಢವಾದ ಧ್ವನಿ ಎತ್ತಿದ್ದಾರೆ.

ದೆಹಲಿ ಜಿಲ್ಲಾ ನ್ಯಾಯಾಂಗಕ್ಕೆ ನೇಮಕವಾದ 108 ಅಭ್ಯರ್ಥಿಗಳಲ್ಲಿ 78 ಮಂದಿ ಮಹಿಳೆಯರೇ ಇದ್ದರು. ಇಂತಹ ನೇಮಕಾತಿ ಮಹಿಳಾ ಶಿಕ್ಷಣಕ್ಕೆ ಉತ್ತೇಜನ ದೊರೆತಿರುವುದರ ಧ್ಯೋತಕ.

ವೃತ್ತಿಯಲ್ಲಿ ಯಶಸ್ವಿಯಾಗಲು ವಕೀಲೆಯರು ಪುರುಷ ನ್ಯಾಯವಾದಿಗಳಂತೆ ಯೋಚಿಸಬೇಕಿಲ್ಲ ಬದಲಿಗೆ ಮಹಿಳೆಯರಲ್ಲಿ ಇರಬಹುದಾದ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡರೆ ಸಾಕು.

Also Read
ಮಹಿಳಾ ಹಕ್ಕುಗಳ ಪ್ರಬಲ ಪ್ರತಿಪಾದಕಿ ನ್ಯಾ. ಹಿಮಾ ಕೊಹ್ಲಿಗೆ ವಿದಾಯ ಹೇಳಿದ ಸುಪ್ರೀಂ ಕೋರ್ಟ್‌

ಎಸ್‌ಸಿಬಿಎ ಅಧ್ಯಕ್ಷರಾದ ಕಪಿಲ್‌ ಸಿಬಲ್‌ ಮಾತನಾಡಿ,  ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನ್ಯಾಯಮೂರ್ತಿಗಳನ್ನು ನೇಮಿಸಬೇಕೆಂದು ಎಂದು ಮನವಿ ಮಾಡಿದರು.

ವಾಣಿಜ್ಯ ಪ್ರಕರಣಗಳನ್ನು ನಿಭಾಯಿಸುವಲ್ಲಿ ಪರಿಣಿತರಾಗಿರುವ ಕಾನೂನು ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ವಕೀಲರು ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆಯಬೇಕು ಎಂದು ಅವರು ನಿರ್ದಿಷ್ವವಾಗಿ ಸೂಚಿಸಿದರು.

Kannada Bar & Bench
kannada.barandbench.com