ಮನೀಶ್ ಮಹೇಶ್ವರಿ ಪ್ರಕರಣ: ನಿಧಾನವಾಗಿ, ನಿಚ್ಚಳವಾಗಿ ತೀರ್ಪು ಪ್ರಕಟಿಸಿದ ಹೈಕೋರ್ಟ್

ʼನಿಧಾನವಾಗಿಯಾದರೂ ನಿಚ್ಚಳವಾಗಿʼ ಎಂಬಂತೆ ಎರಡು ದಿನಗಳಲ್ಲಿ, ಐದು ಗಂಟೆಗಳ ಅವಧಿ ತೆಗೆದುಕೊಂಡು ತೀರ್ಪು ನೀಡಲಾಗಿದೆ.
Justice G Narendar and Karnataka HC
Justice G Narendar and Karnataka HC

ಉತ್ತರಪ್ರದೇಶ ಪೊಲೀಸರು ನೀಡಿದ್ದ ನೋಟಿಸ್‌ ಪ್ರಶ್ನಿಸಿ ಟ್ವಿಟರ್ ಉದ್ಯೋಗಿ ಮನೀಶ್ ಮಹೇಶ್ವರಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸ್ವಲ್ಪ ವಿಳಂಬ ಅನ್ನಿಸಬಹುದಾದರೂ ಕೊನೆಗೂ ಕರ್ನಾಟಕ ಹೈಕೋರ್ಟ್‌ ಶನಿವಾರ ಆದೇಶ ನೀಡಿದೆ.

ಪ್ರಕರಣದ ವಿಚಾರಣೆಯ ನಂತರ, ನ್ಯಾಯಮೂರ್ತಿ ಜಿ. ನರೇಂದರ್ ಅವರು ಜುಲೈ 9ರಂದು ತೀರ್ಪನ್ನು ಕಾಯ್ದಿರಿಸಿದ್ದರು. ಇದನ್ನು ಜುಲೈ 13ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ತೀರ್ಪುಗಳಲ್ಲಿ ದೋಷ ಇರಬಾರದೆಂಬ ಕಾರಣಕ್ಕೆ ಮತ್ತೊಮ್ಮೆ ಉಲ್ಲೇಖಿತ ಪೂರ್ವನಿದರ್ಶನಗಳನ್ನು ಅಧ್ಯಯನ ಮಾಡಲು ಬಯಸುತ್ತೇನೆ ಎಂದು ಹೇಳಿ ನ್ಯಾಯಾಧೀಶರು ಪ್ರಕರಣವನ್ನು ಮುಂದೂಡಿದ್ದರು.

Also Read
ಟ್ವಿಟರ್‌ ಇಂಡಿಯಾದಲ್ಲಿ ಟ್ವಿಟರ್‌ ಇಂಕ್‌ ಯಾವುದೇ ಷೇರು ಹೊಂದಿಲ್ಲ: ಹೈಕೋರ್ಟ್‌ಗೆ ಮಾಹಿತಿ ನೀಡಿದ ಮನೀಶ್‌ ಪರ ವಕೀಲರು

ಆದೇಶ ಎಷ್ಟು ಸಮಯ ತೆಗೆದುಕೊಂಡಿತು ಎಂಬುದರಲ್ಲಿ ಪ್ರಕರಣದ ಸೂಕ್ಷ್ಮತೆ ಎದ್ದು ಕಾಣುತ್ತದೆ. ತೀರ್ಪು ನೀಡಲು ಎರಡು ದಿನಗಳಲ್ಲಿ ಒಟ್ಟು ಐದು ಗಂಟೆಗಳ ಕಾಲಾವಧಿಯನ್ನು ತೆಗೆದುಕೊಳ್ಳಲಾಯಿತು.

ತನ್ನ ಸಾಮಾಜಿಕ ಮಾಧ್ಯಮದಲ್ಲಿನ ವಿಷಯಗಳ ಮೇಲೆ ಭಾರತದ ಟ್ವಿಟರ್‌ ಹೊಂದಿರುವ ನಿಯಂತ್ರಣದ ವ್ಯಾಪ್ತಿಯಿಂದ ಮೊದಲುಗೊಂಡು ಮಹೇಶ್ವರಿ ಅವರು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರೇ ಎಂಬುದನ್ನೂ ಒಳಗೊಂಡು, ಉತ್ತರಪ್ರದೇಶ ಪೊಲೀಸರು ಕ್ರಿಮಿನಲ್‌ ಕಾನೂನು ನಿಯಮಾವಳಿಗಳನ್ನು ಬಳಸಿಕೊಂಡಿರುವ ರೀತಿಯವರೆಗೆ ನ್ಯಾಯಾಲಯವು ತನ್ನ ಆದೇಶದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚಿಸಿತು.

ಕೊನೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಅಧಿಕಾರಿಯ ಮುಂದೆ ಹಾಜರಾಗಬೇಕು ಎಂದು ನೋಟಿಸ್‌ ನೀಡುವ ಸಲುವಾಗಿ ಸಿಆರ್‌ಪಿಸಿ ಸೆಕ್ಷನ್‌ 41 ಎ ಬಳಸಲು ಅಗತ್ಯವಾದ ಷರತ್ತುಗಳ ಈಡೇರಿಕೆಯಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

Also Read
[ಗಾಜಿಯಾಬಾದ್‌ ದಾಳಿ ವಿಡಿಯೊ] ಟ್ವಿಟರ್‌ನ ಮನೀಶ್‌ ಮಹೇಶ್ವರಿ ಮನವಿ ತೀರ್ಪು ಮುಂದೂಡಿದ ಕರ್ನಾಟಕ ಹೈಕೋರ್ಟ್‌

"ಕಾನೂನಿನ ನಿಬಂಧನೆಗಳನ್ನು ಕಿರುಕುಳದ ಅಸ್ತ್ರವಾಗಿಸಲು ಬಿಡುವುದಿಲ್ಲ. ಅರ್ಜಿದಾರರು (ಮನೀಶ್‌) ಮೇಲ್ನೋಟಕ್ಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಾಬೀತುಪಡಿಸುವ ಒಂದು ಸಾಕ್ಷ್ಯವೂ ಪ್ರತಿವಾದಿಗಳ (ಉತ್ತರ ಪ್ರದೇಶ ಪೊಲೀಸ್‌) ಬಳಿ ಇಲ್ಲ" ಎಂಬುದಾಗಿ ಪೀಠ ಹೇಳಿತು.

ವಾಸ್ತವವಾಗಿ ಕಳೆದ ಎರಡು ದಿನಗಳಿಂದ ನ್ಯಾ. ನರೇಂದ್ರ ಅವರು ತೀರ್ಪಿಗಾಗಿ ಸಮಯ ಮೀಸಲಿಟ್ಟು ತಾವು ವಿಚಾರಣೆ ನಡೆಸಬೇಕಿದ್ದ ಉಳಿದ ಪ್ರಕರಣಗಳನ್ನು ಬೇರೆ ದಿನಗಳಿಗೆ ಮುಂದೂಡಿದರು.

Also Read
[ಟ್ವಿಟರ್‌ನ ಮನೀಶ್‌ ಮಹೇಶ್ವರಿ ಪ್ರಕರಣ] ಮಾಧ್ಯಮ ವರದಿಗಳ ಬಗ್ಗೆ ಅಸಂತೋಷ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್‌

ನಿನ್ನೆ ವಿಚಾರಣೆಯ ಒಂದು ಹಂತದಲ್ಲಿ, ತೀರ್ಪು ಎಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಸ್ವತಃ ನ್ಯಾಯಮೂರ್ತಿಗಳ ಅರಿವಿಗೆ ಬಂದಿತ್ತು ಎಂಬುದು ಸ್ಪಷ್ಟವಾಯಿತು. ಅವರು ಆಗ ಹೇಳಿದ್ದು “ನಾಳೆ ನಾನು ನನ್ನ ಧ್ವನಿಪೆಟ್ಟಿಗೆಗೆ (ಗಂಟಲಿಗೆ) ಸ್ವಲ್ಪ ಬಿಡುವುಕೊಡಬೇಕಿದೆ."

ತೀರ್ಪು ಪ್ರಕಟವಾದ ನಂತರ, ಮನೀಶ್‌ ಅವರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್, ನ್ಯಾಯಮೂರ್ತಿಗಳ ಸಮಯ ಮತ್ತು ವಹಿಸಿದ ತಾಳ್ಮೆ ಕುರಿತಂತೆ ಧನ್ಯವಾದ ಅರ್ಪಿಸಿದರು. ಜೊತೆಗೆ ನ್ಯಾಯಾಲಯದ ಸುದೀರ್ಘ ಸಮಯ ತೆಗೆದುಕೊಂಡದ್ದಕ್ಕಾಗಿ ಅವರು ಕ್ಷಮೆ ಯಾಚಿಸಿದರು. ಆಗ ನ್ಯಾಯಮೂರ್ತಿಗಳು “ನಾವು ಕೇವಲ ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ” ಎಂದರು.

Kannada Bar & Bench
kannada.barandbench.com