ಸೇನಾಧಿಕಾರಿ ಹಾಗೂ ಅವರ ಭಾವಿ ಪತ್ನಿ ಮೇಲೆ ಪೊಲೀಸರ ಹಲ್ಲೆ: ಒರಿಸ್ಸಾ ಹೈಕೋರ್ಟ್ ಅಸಮಾಧಾನ

ಅಧಿಕಾರಿ ಮತ್ತು ಅವರ ಭಾವಿ ಪತ್ನಿಯ ಹೆಸರನ್ನು ಪ್ರಕಟಿಸುವುದನ್ನು ನಿರ್ಬಂಧಿಸಿರುವ ನ್ಯಾಯಾಲಯ ಪೊಲೀಸ್ ಠಾಣೆಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಕಾರ್ಯನಿರ್ವಹಣೆಯ ಬಗ್ಗೆ ವರದಿ ಕೇಳಿದೆ.
Orissa High Court with Indian Army
Orissa High Court with Indian Army
Published on

ಒಡಿಶಾದ ಭರತ್‌ಪುರ ಪೊಲೀಸ್‌ ಠಾಣೆಯ್ಲಲಿ ಸೇನಾ ಮೇಜರ್‌ ಹಾಗೂ ವೃತ್ತಿಯಿಂದ ವಕೀಲೆಯಾಗಿರುವ ಅವರ ಭಾವಿ ಪತ್ನಿ ಮೇಲೆ ದಬ್ಬಾಳಿಕೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಯೋಧರ ಘನತೆ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಒರಿಸ್ಸಾ ಹೈಕೋರ್ಟ್‌ಗೆ ಸೋಮವಾರ ಸೂಚಿಸಿದೆ.

ರಜೆಯಲ್ಲಿದ್ದ ಸೇನಾಧಿಕಾರಿಯ ಪ್ರತಿಷ್ಠೆ ಮತ್ತು ಘನತೆಯನ್ನು ಪ್ರಕರಣ ಒಳಗೊಂಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಚಕ್ರಧಾರಿ ಶರಣ್ ಸಿಂಗ್  ಮತ್ತು ನ್ಯಾಯಮೂರ್ತಿ ಸಾವಿತ್ರಿ ರಾಥೋ ಅವರಿದ್ದ ಪೀಠ ತಿಳಿಸಿದೆ.

Also Read
ಸೇನಾಧಿಕಾರಿ ಪುರೋಹಿತ್‌ಗೆ ಮಾಲೆಗಾಂವ್ ಸ್ಫೋಟದ ಬಗ್ಗೆ ತಿಳಿದಿದ್ದರೆ ಅದನ್ನೇಕೆ ತಡೆಯಲಿಲ್ಲ? ಬಾಂಬೆ ಹೈಕೋರ್ಟ್ ಪ್ರಶ್ನೆ

ಭರತ್‌ಪುರದ ಪೊಲೀಸ್‌  ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ ಎಂಬ ವಾದ ಆಲಿಸಿದ ನ್ಯಾಯಾಲಯ ಪೊಲೀಸ್ ಠಾಣೆಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಕಾರ್ಯನಿರ್ವಹಣೆಯ ಬಗ್ಗೆ ವರದಿ ಕೇಳಿತು.

 ಪೊಲೀಸ್‌ ಠಾಣೆಗಳಲ್ಲಿ ಸಿಸಿಟಿವಿ ಇರಬೇಕು ಎಂಬ ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಇದು ಉಲ್ಲಂಘಿಸಿದೆ ಎಂದು ಅದು ಹೇಳಿತು.

ಒಡಿಶಾದಲ್ಲಿ 650 ಪೊಲೀಸ್ ಠಾಣೆಗಳಿದ್ದು, ಅವುಗಳಲ್ಲಿ 559 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ಮಾಹಿತಿ ನೀಡಿದರು. ಹೊಸದಾಗಿ ನಿರ್ಮಾಣವಾಗಿರುವ ಕೆಲವು ಪೊಲೀಸ್ ಠಾಣೆಗಳಲ್ಲಿ ಈ ಸೌಲಭ್ಯದ ಕೊರತೆ ಇದೆ ಎಂದು ತಿಳಿಸಿದರು.

ಆಗ ನ್ಯಾಯಾಲಯ ರಾಜ್ಯದ ಎಲ್ಲಾ ಪೊಲೀಸ್‌ ಠಾಣೆ ಹಾಗೂ ಹೊರಠಾಣೆಗಳಲ್ಲಿ ಸಿಸಿಟಿವಿ ಸೌಲಭ್ಯ ಕಲ್ಪಿಸಿ ಆ ಕುರಿತು ಮುಂದಿನ ವಿಚಾರಣೆ ನಡೆಯಲಿರುವ  ಅಕ್ಟೋಬರ್ 8ರೊಳಗೆ ವರದಿ ನೀಡುವಂತೆ ಒಡಿಶಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಯಾಳ್ ಗಂಗವಾಲ್‌ ಅವರಿಗೆ ಸೂಚಿಸಿತು.

Also Read
ಮೆಸೆಂಜರ್ ಆಪ್ ಬಳಕೆ: ಸೇನಾಧಿಕಾರಿಗೆ ವಿಧಿಸಿದ್ದ ಶಿಕ್ಷೆ ರದ್ದುಗೊಳಿಸಿದ ತೆಲಂಗಾಣ ಹೈಕೋರ್ಟ್

ಪ್ರಕರಣದ ಸೂಕ್ಷ್ಮ ಸ್ವರೂಪವನ್ನು ಪರಿಗಣಿಸಿ, ಮಾಧ್ಯಮ/ಸಾಮಾಜಿಕ ಮಾಧ್ಯಮ ಗಳಲ್ಲಿ ಸೇನಾಧಿಕಾರಿ ಮತ್ತು ಅವರ ಭಾವಿ ಪತ್ನಿ ಅವರ ಹೆಸರು ಪ್ರಕಟಿಸಿದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿತು.

ಸೆಪ್ಟಂಬರ್ 14 ರಂದು ರಸ್ತೆಯಲ್ಲಿ ತೆರಳುತ್ತಿದ್ದಾಗ ಉಂಟಾದ ಗಲಾಟೆಯ ಬಗ್ಗೆ ದೂರು ಸಲ್ಲಿಸಲು ಪೊಲೀಸ್‌ ಠಾಣೆಗೆ ಸೇನಾಧಿಕಾರಿ ಮತ್ತು ಅವರ ಭಾವಿ ಪತ್ನಿ ತೆರಳಿದ್ದರು. ಆಗ ಪೊಲೀಸರು ಸೇನಾಧಿಕಾರಿಗೆ ಹಿಂಸೆ ನೀಡಿದ್ದರು ಮತ್ತು ಅವರ ಭಾವಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಇನ್ನೋರ್ವ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಪಿಎಸ್ ಶೇಖಾವತ್ ಬರೆದ ಪತ್ರದ ಆಧಾರದ ಮೇಲೆ ಹೈಕೋರ್ಟ್ ಘಟನೆಯ ಕುರಿತು ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು.

Kannada Bar & Bench
kannada.barandbench.com