
ತಮಗೆ ಮಕ್ಕಳ ಆರೈಕೆ ರಜೆ ನಿರಾಕರಿಸಿದ್ದನ್ನು ಪ್ರಶ್ನಿಸಿ ಜಾರ್ಖಂಡ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಹೈಕೋರ್ಟ್ ಪ್ರತಿಕ್ರಿಯೆ ಕೇಳಿದೆ [ಕಾಶಿಕಾ ಎಂ ಪ್ರಸಾದ್ ಮತ್ತು ಜಾರ್ಖಂಡ್ ಸರ್ಕಾರ ನಡುವಣ ಪ್ರಕರಣ].
ತಾನು ಒಂಟಿ ಪೋಷಕಿ ಎಂದು ಅರ್ಜಿ ಸಲ್ಲಿಸಿರುವ ನ್ಯಾಯಾಧೀಶೆ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎ ಜಿ ಮಸೀಹ್ ಅವರಿದ್ದ ಪೀಠ ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಹೈಕೋರ್ಟಿಗೆ ನೋಟಿಸ್ ಜಾರಿ ಮಾಡಿತು.
ನೋಟಿಸಿಗೆ ಒಂದು ವಾರದೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿರುವ ಅದು ಮುಂದಿನ ವಿಚಾರಣೆ ವೇಳೆ ಪ್ರಕರಣ ವಿಲೇವಾರಿ ಮಾಡುವುದಾಗಿ ತಿಳಿಸಿದೆ.
ಅರ್ಜಿದಾರ ನ್ಯಾಯಧೀಶೆ ಪರ ವಕೀಲರು ಆಕೆಯ ಕಾರ್ಯಕ್ಷಮತೆಯ ದಾಖಲೆಗಳನ್ನು ಆಧರಿಸಿ ಅವರಿಗೆ ರಜೆ ಮಂಜೂರು ಮಾಡಬೇಕು ಎಂದು ಕೋರಿದರು.
ನ್ಯಾಯಾಧೀಶೆ ನೇರವಾಗಿ ಸುಪ್ರೀಂ ಕೋರ್ಟ್ ಸಂಪರ್ಕಿಸುವ ಬದಲು ಜಾರ್ಖಂಡ್ ಹೈಕೋರ್ಟ್ ಆಡಳಿತ ವಿಭಾಗವನ್ನು ಏಕೆ ಸಂಪರ್ಕಿಸಲಿಲ್ಲ ಎಂದು ಪೀಠ ವಕೀಲರನ್ನು ಕೇಳಿತು. ಆಗ ವಕೀಲರು, ಅರ್ಜಿದಾರೆ ತುರ್ತು ಪರಿಹಾರ ಕೋರುತ್ತಿದ್ದಾರೆ ಮತ್ತು ಹೈಕೋರ್ಟ್ ನಿಯಮಗಳ ಪ್ರಕಾರ ಪ್ರಕರಣವನ್ನು ತುರ್ತು ಎಂದು ಪರಿಗಣಿಸದೆ ಬೇಸಿಗೆ ರಜೆಯ ನಂತರ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು ಎಂದು ವಕೀಲರು ಉತ್ತರಿಸಿದರು.
ನಂತರ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯ ದಿನ ಪ್ರಕರಣ ನಿರ್ಧರಿಸುವುದಾಗಿ ಹೇಳಿತು.