ನಟ ಸೈಫ್‌ಗೆ ಸೇರಿದ ₹15,000 ಕೋಟಿ ಆಸ್ತಿ ಉತ್ತರಾಧಿಕಾರದ ವ್ಯಾಜ್ಯ: ಮ.ಪ್ರದೇಶ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ಖಾನ್ ಅವರ ಉತ್ತರಾಧಿಕಾರದ ಕುರಿತು ಹೊಸದಾಗಿ ವಾದ ಆಲಿಸುವಂತೆ ಜೂನ್ 30ರಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.
Saif Ali Khan
Saif Ali Khan instagram
Published on

ಬಾಲಿವುಡ್‌ ನಟ ಸೈಫ್‌ ಅಲಿಖಾನ್‌ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ₹15,000 ಕೋಟಿ ನವಾಬ ಮನೆತನದ ಆಸ್ತಿ ವಿಭಜನೆ ವ್ಯಾಜ್ಯವನ್ನು ಮತ್ತೆ ತೆರೆಯಲು ಮಧ್ಯಪ್ರದೇಶ ಹೈಕೋರ್ಟ್‌ ಜೂನ್ 30ರಂದು ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ನವಾಬ್ ಹಮೀದುಲ್ಲಾ ಖಾನ್ ಅವರ ಹಿರಿಯ ಸಹೋದರ, ಸೈಫ್ ಅಲಿ ಖಾನ್ ಅವರ ಮುತ್ತಜ್ಜ ಮತ್ತು ಹಿಂದಿನ ಭೋಪಾಲ್ ರಾಜ್ಯದ ಕೊನೆಯ ಆಡಳಿತಗಾರ ಒಬೈದುಲ್ಲಾ ಖಾನ್ ಅವರ ವಂಶಸ್ಥ ಒಮರ್ ಅಲಿ (ಸೈಫ್ ಅವರ ಸೋದರಸಂಬಂಧಿ) ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠ ಮಧ್ಯಂತರ ಆದೇಶ ಹೊರಡಿಸಿತು.

Also Read
ರಾಜಮನೆತನದ ₹15,000 ಕೋಟಿ ಆಸ್ತಿ ವಿವಾದ: ಉತ್ತರಾಧಿಕಾರದ ಆದೇಶ ರದ್ದುಪಡಿಸಿದ ಮ.ಪ್ರದೇಶ ಹೈಕೋರ್ಟ್, ಸೈಫ್‌ಗೆ ಹಿನ್ನಡೆ

ನವಾಬರ ಖಾಸಗಿ ಆಸ್ತಿಗಳು ಭೋಪಾಲ್‌ ರಾಜಮನೆತನದ ಭಾಗವಾಗಿದ್ದು ರಾಜಮನೆತನದ ಉತ್ತರಾಧಿಕಾರಿ ಸೈಫ್ ಅಲಿ ಖಾನ್ ಅವರ ಅಜ್ಜಿಗೆ ಆ ಆಸ್ತಿ ವರ್ಗಾವಣೆಯಾಗುತ್ತದೆ ಎಂದು ಫೆಬ್ರವರಿ 2000ರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು.

ಶುಕ್ರವಾರ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಿರಿಯ ವಕೀಲ ದೇವದತ್ತ ಕಾಮತ್‌ ಮತ್ತವರ ತಂಡದ ವಾದ  ಆಲಿಸಿದ ಸುಪ್ರೀಂ ಕೋರ್ಟ್‌ ಪ್ರಕರಣಕ್ಕೆ ತಡೆ ನೀಡುವುದಾಗಿ ತಿಳಿಸಿತು.

ಸೈಫ್ ಅಲಿ ಖಾನ್, ಅವರ ತಾಯಿ ಶರ್ಮಿಳಾ ಟ್ಯಾಗೋರ್ ಮತ್ತು ಸಹೋದರಿಯರಾದ ಸೋಹಾ ಅಲಿ ಖಾನ್ ಮತ್ತು ಸಬಾ ಅಲಿ ಖಾನ್ ಅವರು ತಮ್ಮ ತಂದೆಯ ತಾಯಿ (ಅಜ್ಜಿ) ಸಾಜಿದಾ ಸುಲ್ತಾನ್ ಮೂಲಕ ಆಸ್ತಿ ಪಡೆದಿದ್ದರು.

ಸಾಜಿದಾ ಸುಲ್ತಾನರ ತಂದೆ ಹಮೀದುಲ್ಲಾ ಖಾನ್, 1949ರಲ್ಲಿ ಭಾರತದೊಂದಿಗೆ ವಿಲೀನಗೊಂಡ ಭೋಪಾಲ್ ರಿಯಾಸತ್‌ನ ನವಾಬರಾಗಿದ್ದರು. 1960ರಲ್ಲಿ ಹಮೀದುಲ್ಲಾ ಖಾನ್ ನಿಧನರಾದ ನಂತರ, ಸಾಜಿದಾ ಸುಲ್ತಾನರು ನವಾಬರಾದರು. ಸಿಂಹಾಸನ  ಸಾಮಾನ್ಯವಾಗಿ ಸಾಜಿದಾ ಸುಲ್ತಾನರ ಅಕ್ಕ ಅಬಿದಾ ಸುಲ್ತಾನರಿಗೆ ಹಸ್ತಾಂತರವಾಗಬೇಕಿತ್ತು. ಆದರೆ ಅವರು 1950ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದರು.

Also Read
ನಟ ಸೈಫ್‌ ಮೇಲೆ ದಾಳಿ: ಜನವರಿ 29ರವರೆಗೆ ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡಿದ ಮುಂಬೈ ನ್ಯಾಯಾಲಯ

1962ರಲ್ಲಿ, ಭಾರತ ಸರ್ಕಾರ ನವಾಬ್ ಹಮೀದುಲ್ಲಾ ಖಾನ್ ಅವರ ವೈಯಕ್ತಿಕ ಆಸ್ತಿಯನ್ನು ಸಾಜಿದಾ ಸುಲ್ತಾನ್ ಅವರ ಖಾಸಗಿ ಆಸ್ತಿ ಎಂದು ಘೋಷಿಸಿತು. ಆದರೆ ನವಾಬ್ ಹಮೀದುಲ್ಲಾ ಖಾನ್ ಅವರ ಇತರ ಕುಟುಂಬ ಸದಸ್ಯರು, ಅವರ ಸಹೋದರ ಒಬೈದುಲ್ಲಾ ಖಾನ್ ಮತ್ತು ಅವರ ಮೂರನೇ ಮಗಳು ರಬಿಯಾ ಸುಲ್ತಾನ್ ಅವರ ವಂಶಸ್ಥರು ಸಾಜಿದಾ ಸುಲ್ತಾನ್ ಅವರಿಗೆ ಆಸ್ತಿಗಳನ್ನು ವರ್ಗಾಯಿಸುವುದನ್ನು ಪ್ರಶ್ನಿಸಿದ್ದರು.

ಮಧ್ಯಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿ  ಸಂಜಯ್‌ ದ್ವಿವೇದಿ ಅವರು ಜೂನ್ 30ರಂದು ನೀಡಿದ ಆದೇಶದಲ್ಲಿ ವಿಚಾರಣಾ ನ್ಯಾಯಾಲಯ ಹೊಸದಾಗಿ ಪ್ರಕರಣ ಆಲಿಸಬೇಕು ಎಂದು ತಿಳಿಸಿದ್ದರು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

Kannada Bar & Bench
kannada.barandbench.com