ಶಬರಿಮಲೆಯಲ್ಲಿ ವಿಗ್ರಹ ಸ್ಥಾಪನೆಗೆ ಅನಧಿಕೃತ ನಿಧಿ ಸಂಗ್ರಹ: 4 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಕೇರಳ ಹೈಕೋರ್ಟ್ ಆದೇಶ

ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಡಲಾಗಿದ್ದ ಸ್ವಯಂಪ್ರೇರಿತ ಮೊಕದ್ದಮೆ ಮುಕ್ತಾಯಗೊಳಿಸಿದ ನ್ಯಾಯಾಲಯ ಈ ನಿರ್ದೇಶನ ನೀಡಿತು.
Sabarimala
Sabarimala
Published on

ಶಬರಿಮಲೆ ಶ್ರೀ ಧರ್ಮ ಶಾಸ್ತ್ರ ದೇವಸ್ಥಾನದಲ್ಲಿ ಅಯ್ಯಪ್ಪ ದೇವರ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಇಲ್ಲದೆ ಖಾಸಗಿ ವ್ಯಕ್ತಿಯೊಬ್ಬರು ಸಾರ್ವಜನಿಕರಿಂದ ಹಣ ಪಡೆದಿದ್ದಾರೆ ಎಂಬ ಆರೋಪದ ತನಿಖೆಯನ್ನು ಪೂರ್ಣಗೊಳಿಸಲು ಕೇರಳ ಹೈಕೋರ್ಟ್ ಮಂಗಳವಾರ ಪೊಲೀಸರಿಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಿದೆ [ಸ್ವಯಂ ಪ್ರೇರಿತ ಪ್ರಕರಣ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಕಳೆದ ಜುಲೈನಲ್ಲಿ ಪ್ರಕಣಕ್ಕೆ ಸಂಬಂಧಿಸಿದಂತೆ ಹೂಡಲಾಗಿದ್ದ ಸ್ವಯಂಪ್ರೇರಿತ ಪ್ರಕರಣ ಮುಕ್ತಾಯಗೊಳಿಸುವಾಗ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ ವಿ ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.

Also Read
ವಿಶ್ವ ಅಯ್ಯಪ್ಪ ಸಂಗಮ ಅಬಾಧಿತ: ಶಬರಿಮಲೆ ದೇವಸ್ಥಾನದ ಪಾವಿತ್ರ್ಯ, ಭಕ್ತರ ಹಕ್ಕು ರಕ್ಷಿಸುವಂತೆ ಕೇರಳ ಹೈಕೋರ್ಟ್ ಆದೇಶ

ಶಬರಿಮಲೆಯಲ್ಲಿ 2 ಅಡಿ ಎತ್ತರದ, 150 ಕೆಜಿ ತೂಕದ ವಿಗ್ರಹವನ್ನು ಸ್ಥಾಪಿಸಲು ಲೋಟಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಡಾ. ಇ ಕೆ ಸಹದೇವನ್ ಅವರಿಗೆ ಟಿಡಿಬಿ ನೀಡಿದ ಅನುಮತಿಯನ್ನು‌ ಹಿಂಪಡೆಯಲಾಗಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸಹದೇವನ್ ಕೂಡ ಯೋಜನೆಯನ್ನು ಸದ್ಯಕ್ಕೆ ನಿಲ್ಲಿಸಲು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯ ದಾಖಲಿಸಿತು.

ಹೀಗಾಗಿ ದಾವೆ ಬಾಕಿ ಇಡಲು ಕಾರಣ ಇಲ್ಲ ಎಂದ‌ ಪೀಠ ಪೊಲೀಸರು ತನಿಖೆ ಮುಂದುವರೆಸಿ ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ನಿರ್ದೇಶನಗಳನ್ನು ನೀಡಿ ಅದು ಸ್ವಯಂಪ್ರೇರಿತ ಪ್ರಕರಣವನ್ನು ಮುಕ್ತಾಯಗೊಳಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಪಡಿಸಿಕೊಂಡಿದ್ದ ಸುಮಾರು ₹6 ಲಕ್ಷ ಮೌಲ್ಯದ ಹಣವನ್ನು ಕಾನೂನಿನ ಪ್ರಕಾರ ನಿರ್ವಹಿಸಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು ಎಂದು ಕೂಡ ನ್ಯಾಯಾಲಯ ಆದೇಶಿಸಿದೆ.

ವಿಗ್ರಹ ಸ್ಥಾಪಿಸಲು ಅನುಮತಿ ಪಡೆದ ನಂತರ, ಸಹದೇವನ್ ಅವರು ಸಾರ್ವಜನಿಕರ ದೇಣಿಗೆ ಕೋರಿ ಕರಪತ್ರ ವಿತರಿಸಿದ್ದರು.

Also Read
ಶಬರಿಮಲೆ ಬಳಿ ಸುರಿಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ವನ್ಯಜೀವಿಗಳ ಪಾಲಿಗೆ ದುರಂತವಾಗಲಿದೆ: ಕೇರಳ ಹೈಕೋರ್ಟ್

ಟಿಡಿಬಿ ಮತ್ತು ರಾಜ್ಯ ಸರ್ಕಾರ ಎರಡೂ ಯೋಜನೆಗೆ ಅನುಮೋದನೆ ನೀಡಿವೆ ಎಂದು ಅವರು ಹೇಳಿಕೊಂಡಿದ್ದರು.

ಆದರೆ, ಈ ರೀತಿ ಸಾರ್ವಜನಿಕ ನಿಧಿ ಸಂಗ್ರಹಿಸಲು ಅವಕಾಶ ನೀಡಿದ್ದೇಕೆ ಎಂದು ಕೇಳಿದ ನ್ಯಾಯಾಲಯ ಮತ್ತು ಟಿಡಿಬಿಯ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಂಡಿತು.

ಯೋಜನೆ ಸ್ಥಗಿತಗೊಂಡಿರುವುದರಿಂದ, ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣವನ್ನು ಮುಕ್ತಾಯಗೊಳಿಸಿತಾದರೂ ಈಗಾಗಲೇ ಪ್ರಾರಂಭಿಸಲಾದ ಕ್ರಿಮಿನಲ್ ವಿಚಾರಣೆಗಳು ಅದರ ತಾರ್ಕಿಕ ಅಂತ್ಯ ತಲುಪಬೇಕು ಎಂದು ನಿರ್ದೇಶಿಸಿತು.

Kannada Bar & Bench
kannada.barandbench.com