ರೈತರಿಗೆ ಪ್ರತಿಭಟಿಸುವ ಹಕ್ಕು ಇದೆ ಎಂದ ಸಿಜೆಐ; ಸ್ವತಂತ್ರ ಸಮಿತಿಯಲ್ಲಿ ಪಿ ಸಾಯಿನಾಥ್, ರೈತ ಸಂಘಟನೆಗಳಿಗೆ ಅವಕಾಶ

ಆಸ್ತಿಪಾಸ್ತಿಗೆ ನಷ್ಟ ಅಥವಾ ಮನುಷ್ಯರ ಜೀವಕ್ಕೆ ಧಕ್ಕೆ ತರದಂತೆ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕು ರೈತರಿಗೆ ಇದೆ ಎಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅಭಿಪ್ರಾಯಪಟ್ಟಿದ್ದಾರೆ.
Supreme Court, Farmers protest
Supreme Court, Farmers protest
Published on

ಆಸ್ತಿಪಾಸ್ತಿಗೆ ನಷ್ಟ ಅಥವಾ ಮನುಷ್ಯರ ಜೀವಕ್ಕೆ ಧಕ್ಕೆ ತರದಂತೆ ಪ್ರತಿಭಟಿಸುವ ಸಾಂವಿಧಾನಿಕ ಹಕ್ಕು ರೈತರಿಗೆ ಇದೆ ಎಂದು ಸುಪ್ರಿಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಸುಪ್ರೀಂಕೋರ್ಟ್‌ ರಚಿಸಲಿರುವ ನಿಷ್ಪಕ್ಷಪಾತ ಸ್ವತಂತ್ರ ಸಮಿತಿಯಲ್ಲಿ ಹಿರಿಯ ಪತ್ರಕರ್ತ ಪಿ ಸಾಯಿನಾಥ್ ಹಾಗೂ ವಿವಿಧ ರೈತ ಸಂಘಟನೆಗಳನ್ನೂ ಒಳಗೊಳ್ಳುವಂತೆ ಅವರು ಸೂಚಿಸಿದ್ದಾರೆ.

“ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇವೆ. ನಾವು ಪ್ರತಿಭಟನೆಯ ಮೂಲಭೂತ ಹಕ್ಕನ್ನು ಗುರುತಿಸುತ್ತೇವೆ. ಇದರಲ್ಲಿ ಸಮತೋಲನ ಸಾಧಿಸುವಂಥದ್ದು ಏನೂ ಇಲ್ಲ. ಆದರೆ, ಅದು ಇನ್ನೊಬ್ಬರ ಜೀವಕ್ಕೆ ಹಾನಿಯುಂಟು ಮಾಡಬಾರದು ಅಷ್ಟೆ” ಎಂದು ಅವರು ವಿಚಾರಣೆ ವೇಳೆ ತಿಳಿಸಿದರು. ರೈತರ ಪ್ರತಿಭಟನೆಯಿಂದ ದೆಹಲಿ ಜನಜೀವನಕ್ಕೆ ತೊಂದರೆಯಾಗುತ್ತಿದ್ದು ಅವರನ್ನು ತೆರವುಗೊಳಿಸಬೇಕು ಎಂದು ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ರೀತಿ ಅಭಿಪ್ರಾಯಪಟ್ಟಿತು.

ದೆಹಲಿ ಮೂಲದ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ “ ಪ್ರತಿಭಟನೆಯಿಂದ ಸಂಚಾರ ನಿರ್ಬಂಧಿಸಲಾಗುತ್ತಿದೆ, ಸರಕುಗಳ ಬೆಲೆ ಹೆಚ್ಚುತ್ತಿದೆ. ಜನರು ಓಡಾಡಲು ಆಗುತ್ತಿಲ್ಲ. ಉದ್ಯೋಗ ನಷ್ಟಕ್ಕೆ ಯಾರು ಹೊಣೆ? ಗುರುಗ್ರಾಮ ಮತ್ತು ನೋಯ್ಡಾಗಳಲ್ಲಿ ಮಧ್ಯಮ ವರ್ಗ ವಾಸಿಸುತ್ತದೆ ಎನ್ನುವುದನ್ನು ಗಮನಿಸಬೇಕು” ಎಂದರು.

Also Read
'ರೈತರ ಪ್ರತಿಭಟನೆ ಶೀಘ್ರದಲ್ಲೇ ರಾಷ್ಟ್ರೀಯ ಸಮಸ್ಯೆಯಾಗಬಹುದು': ಸಮಿತಿ ರಚನೆಗೆ ಮುಂದಾದ ಸುಪ್ರೀಂಕೋರ್ಟ್

ಆಗ ನ್ಯಾ. ಬೊಬ್ಡೆ ಅವರು “ನಿಮ್ಮ ವಾದವನ್ನು ಯಾರೂ ನಿರಾಕರಿಸುವುದಿಲ್ಲ. ರೈತರಿಗೆ ಪ್ರತಿಭಟಿಸುವ ಹಕ್ಕಿದೆ ಎನ್ನುವುದನ್ನು ನಾವು ಗುರುತಿಸುತ್ತೇವೆ. ನಾವು ಅದರಲ್ಲಿ ಮಧ್ಯಪ್ರವೇಶಿಸಲು ಇಚ್ಛಿಸುವುದಿಲ್ಲ. ಅದರೆ, ಪ್ರತಿಭಟನೆಯ ರೀತಿಯ ಬಗ್ಗೆ ನಾವು ಗಮನಹರಿಸುತ್ತೇವೆ. ಪ್ರತಿಭಟನೆಯ ರೀತಿಯನ್ನು ಬದಲಿಸಬಹುದೇ ಎಂದು ನಾವು ಕೇಂದ್ರವನ್ನು ಕೇಳುತ್ತೇವೆ” ಎಂದು ಹೇಳಿದರು.

ಈ ವೇಳೆ ಪ್ರತಿಭಟನೆಯಿಂದ ಉಂಟಾಗುವ ಆಸ್ತಿಪಾಸ್ತಿ ನಷ್ಟದ ಬಗ್ಗೆ ಹಿರಿಯ ವಕೀಲ ಸಾಳ್ವೆ ಗಮನಸೆಳೆದಾಗ ನ್ಯಾಯಮೂರ್ತಿಗಳು “ಪ್ರತಿಭಟನೆಗೆ ಒಂದು ಗುರಿ ಇರುತ್ತದೆ. ಸುಮ್ಮನೆ ಕೂತು ಪ್ರತಿಭಟಿಸುವುದರಿಂದ ಗುರಿ ಈಡೇರದು. ಕೇಂದ್ರ ಮತ್ತು ರೈತರು ಮಾತುಕತೆ ನಡೆಸಬೇಕು. ಪ್ರತಿಭಟನೆಯ ಉದ್ದೇಶ ಪ್ರತಿಭಟನೆ ಮಾತ್ರವೇ ಅಲ್ಲದೆ ಹೋದರೆ ನಾವು ಅಂತಹ ಉದ್ದೇಶ ಈಡೇರಿಕೆಯ ಮಾತುಕತೆಯನ್ನು ಸುಗಮಗೊಳಿಸಬಹುದು” ಎಂದರು.

Also Read
ಕೃಷಿ ಕಾಯಿದೆಗಳು ಕೃಷಿಯನ್ನು ಕಾರ್ಪೊರೇಟೀಕರಣ ಮಾಡಲಿದ್ದು, ರೈತರನ್ನು ಶೋಷಿಸಲಿವೆ: ಸುಪ್ರೀಂನಲ್ಲಿ ಕಿಸಾನ್ ಸಂಘದ ಮನವಿ

ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ವಾದವನ್ನು ಆಲಿಸಿದ ನ್ಯಾಯಾಲಯ ಸರ್ಕಾರದ ಅಭಿಪ್ರಾಯವನ್ನು ರೈತರು ಒಪ್ಪುತ್ತಾರೆ ಎಂದು ಅನ್ನಿಸುವುದಿಲ್ಲ. ಸಮಿತಿ ಈ ಬಗ್ಗೆ ನಿರ್ಧರಿಸಲಿ. ಸರ್ಕಾರ ಈವರೆಗೆ ಈ ವಿಚಾರದಲ್ಲಿ ಯಶಸ್ಸು ಸಾಧಿಸಿಲ್ಲ” ಎಂದಿತು. ಆಗ ಮಧ್ಯಪ್ರವೇಶಿಸಿದ ವೇಣುಗೋಪಾಲ್‌ ರೈತರು “ತಮ್ಮ ನಿಲುವಿನಲ್ಲಿ ಹಟ ಹಿಡಿದಿದ್ದಾರೆ” ಎಂದರು. ಅದಕ್ಕೆ ನ್ಯಾಯಾಲಯ “ನೀವು (ಸರ್ಕಾರ) ಹಟ ಹಿಡಿದಿದ್ದೀರಿ ಎಂದು ಅವರು (ರೈತರು) ಭಾವಿಸಬಹುದು” ಎಂದಿತು.

ಮತ್ತೊಂದೆಡೆ ಸಾಲಿಸಿಟರ್‌ ಜನರಲ್‌ ಅವರು, “ಈ ಜಟಿಲತೆಯನ್ನು ಕೊನೆಗಾಣಿಸುವಂತಹವರು ನಮಗೆ ಯಾರಾದರೂ ಬೇಕು. ಸಮಿತಿಯ ಬದಲಿಗೆ ಸಂವಾದವನ್ನು ಸಾಧ್ಯವಾಗಿಸುವ ಉನ್ನತ ವ್ಯಕ್ತಿಗಳು ಬೇಕು. ರೈತರ ಪ್ರತಿಯೊಂದು ಪ್ರಶ್ನೆಗೂ ನಮ್ಮ ಬಳಿ ಪರಿಹಾರಗಳಿವೆ” ಎಂದರು.

Also Read
ಕೃಷಿ ಮಸೂದೆಗೆ ರಾಷ್ಟ್ರಪತಿ ಸಹಿ- ರೈತರ ಕಾಯಿದೆ ಜಾರಿಗೆ

ಪಂಜಾಬ್‌ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪಿ ಚಿದಂಬರಂ “ಸಾಳ್ವೆಯವರ ವಾದದ ಬಗ್ಗೆ ನಮಗೆ ಗಂಭೀರ ಆಕ್ಷೇಪಗಳಿವೆ. ನಗರವನ್ನು ನಿರ್ಬಂಧಿಸಿರುವವರು ಯಾರು? ಅಲ್ಲಿ, ಕಬ್ಬಿಣದ ಗೋಡೆ, ತಂತಿ ಬೇಲಿ ಮತ್ತು ಈಗ ಕಂಟೇನರ್‌ಗಳನ್ನು ನಿಲ್ಲಿಸಲಾಗಿದೆ… ಸರ್ಕಾರವೇ ರಸ್ತೆಗಳನ್ನು ಮುಚ್ಚಿ, ರೈತರು ರಸ್ತೆಗಳನ್ನು ಮುಚ್ಚಿದ್ದಾರೆ ಎಂದು ಹೇಳಬಾರದು," ಎಂದು ಆಕ್ಷೇಪಿಸಿದರು. ಪಂಜಾಬ್‌ ಸರ್ಕಾರ ಈ ವಿಷಯದಲ್ಲಿ ಏನೆಲ್ಲಾ ಸಹಾಯ ಮಾಡಬಹುದು ಅದನ್ನು ಮಾಡಲಿದೆ ಎಂದ ಅವರು ಕೃಷಿ ಕಾಯಿದೆಗಳನ್ನು ಹಿಂಪಡೆದು ಮರುಕಾಯಿದೆ ರೂಪಿಸಲು ಸಾಧ್ಯವಿದೆ ಎಂದು ಪರಿಹಾರ ಸೂಚಿಸಿದರು. ವಿಷಯವನ್ನು ಚರ್ಚಿಸಲು ಸಂಸತ್ ಅಧಿವೇಶನ ಕರೆಯುವ ಬಗ್ಗೆಯೂ ಪ್ರಸ್ತಾಪಿಸಿದರು.

ಭಾರತೀಯ ಕಿಸಾನ್‌ ಒಕ್ಕೂಟದ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಎ ಪಿ ಸಿಂಗ್ ಪ್ರತಿಭಟನೆಗೆ ರಾಮಲೀಲಾ ಮೈದಾನದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆದರೆ ಪ್ರತಿಭಟನಕಾರರು ಶಾಂತಿ ಕಾಪಾಡುತ್ತಾರೆ ಎನ್ನಲಾಗದು. ಅದನ್ನು ಪೊಲೀಸರ ವಿವೇಚನೆಗೆ ಬಿಡಬೇಕಾಗುತ್ತದೆ ಎಂದು ಸಿಜೆಐ ಬೊಬ್ಡೆ ತಿಳಿಸಿದರು. ಅಲ್ಲದೆ ಪ್ರತಿಭಟನೆಯೇ ಪ್ರತಿಭಟನೆಯ ಉದ್ದೇಶವಲ್ಲ ಎಂದು ಕೂಡ ಹೇಳಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲಾ ರೈತ ಸಂಘಗಳ ವಾದ ಆಲಿಸಿದ ಬಳಿಕವಷ್ಟೇ ಯಾವುದೇ ಆದೇಶ ನೀಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಎಲ್ಲಾ ರೈತ ಸಂಘಟನೆಗಳಿಗೆ ನೋಟಿಸ್‌ ನೀಡಿ ಶನಿವಾರ ಪ್ರಕರಣದ ವಿಚಾರಣೆ ನಡೆಸಬಹುದು ಎಂದು ಅವರು ತಿಳಿಸಿದರು.

ಅಲ್ಲದೆ ತಾವು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಈಶಾನ್ಯ ರಾಜ್ಯಕ್ಕೆ ತೆರಳಬೇಕಿರುವುದರಿಂದ ಪ್ರಕರಣವನ್ನು ತಾವು ಆಲಿಸಲು ಸಾಧ್ಯವಿಲ್ಲ ಎಂದ ಅವರು ರಜಾಕಾಲೀನ ಪೀಠಕ್ಕೆ ಪ್ರಕರಣ ಆಲಿಸಲು ಸೂಚಿಸುವುದಾಗಿ ತಿಳಿಸಿದರು.

Kannada Bar & Bench
kannada.barandbench.com