

ವಕೀಲರು ಧರಿಸುವ ನೆಕ್‌ಬ್ಯಾಂಡ್ (ಕುತ್ತಿಗೆ ಪಟ್ಟಿ) ಮಾರಾಟ ಮಾಡುವ ಲಾಕಾರ್ಟ್ ಹೆಸರಿನ ಇ-ವಾಣಿಜ್ಯ ಜಾಲತಾಣ ಹಿರಿಯ ವಕೀಲರು, ನ್ಯಾಯಮೂರ್ತಿಗಳು ಮಾತ್ರವಲ್ಲದೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನಕಲಿ ಹೇಳಿಕೆಗಳನ್ನು ಉತ್ಪನ್ನ ಮಾರಾಟಕ್ಕಾಗಿ ಬಳಸುತ್ತಿರುವುದು ಕಾನೂನು ಸಮುದಾಯದ ಗಮನ ಸೆಳೆದಿದೆ.
ಪುಣೆ ಮೂಲದ ವಕೀಲ ಅಂಕುರ್ ಜಹಗೀರ್‌ದಾರ್ ಅವರು ಲಿಂಕ್ಡ್‌ಇನ್ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ವೈರಲ್ ಆಗಿದ್ದು ನೆಕ್‌ಬ್ಯಾಂಡ್ ಬೆಲೆಯನ್ನೂಅನಗತ್ಯವಾಗಿ ಹೆಚ್ಚಿಸಿರುವಂತೆ ಕಾಣುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಆದರೆ ಅಸಲಿ ತಮಾಷೆ ಇರುವುದು ಉತ್ಪನ್ನದ ಕುರಿತಾಗಿ ಹಾಕಿರುವ ಗ್ರಾಹಕರ ವಿಮರ್ಶೆಗಳಲ್ಲಿ! ಹೀಗೆ ಯಾರದ್ದೆಲ್ಲಾ ಹೆಸರಿನಲ್ಲಿ ರಿವ್ಯೂಗಳನ್ನು ಬರೆಯಲಾಗಿದೆ ಎಂದು ಗಮನಿಸಿದರೆ ಅದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ, ಅರುಣ್ ಮಿಶ್ರಾ, ಹಾಲಿ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ರಾಷ್ಟ್ರೀಯ ಮಾನವ ಹಕ್ಕುಗಳ ಮಾಜಿ ಅಧ್ಯಕ್ಷ ನ್ಯಾ. ಅರುಣ್ ಮಿಶ್ರಾ, ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಮುಂತಾದವರ ಹೆಸರುಗಳು ಕಾಣುತ್ತವೆ. ಇವರೆಲ್ಲರ ಹೆಸರುಗಳನ್ನು ಬಳಸಿ ನಕಲಿ ವಿಮರ್ಶೆಗಳನ್ನು ಬರೆದಿರುವ ಬಗ್ಗೆ ಜಹಗೀರ್‌ದಾರ್ ಗಮನಸೆಳೆದಿದ್ದಾರೆ.
ಅಲ್ಲದೆ ಭಾರತದ ಮಾಜಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲರಾದ ಹರೀಶ್ ಸಾಳ್ವೆ, ಮುಕುಲ್ ರೋಹಟ್ಗಿ, ರಾಕೇಶ್ ದ್ವಿವೇದಿ, ಇಂದಿರಾ ಜೈಸಿಂಗ್, ಮೇನಕಾ ಗುರುಸ್ವಾಮಿ, ಕಾಲಿನ್ ಗೊನ್ಸಾಲ್ವೆಸ್, ಆನಂದ್ ಗ್ರೋವರ್, ಅಭಿಷೇಕ್ ಸಿಂಘ್ವಿ, ಕಪಿಲ್ ಸಿಬಲ್, ಪಿ. ಚಿದಂಬರಂ, ದುಷ್ಯಂತ್ ದವೆ ಅಂತಹ ಘಟಾನುಘಟಿ ವಕೀಲರ ನಕಲಿ ಹೇಳಿಕೆಗಳೂ ಉತ್ಪನದ ವಿಮರ್ಶೆ ಭಾಗದಲ್ಲಿ ಕಂಡುಬಂದಿದ್ದವು.
ಇನ್ನೂ ಅಚ್ಚರಿಯ ಸಂಗತಿಯೆಂದರೆ ಇಹಲೋಕ ತ್ಯಜಿಸಿರುವ ಫಾಲಿ ನಾರಿಮನ್, ಸೋಲಿ ಸೊರಾಬ್ಜಿ ಮತ್ತು ರಾಮ್ ಜೇಠ್ಮಲಾನಿ ಅವರ ಹೇಳಿಕೆಗಳೂ ಕಂಡುಬಂದಿದ್ದವು. ಕಾನೂನು ವೃತ್ತಿಗೆ ಸಂಬಂಧವೇ ಇರದ ಆದಿತ್ಯ ಠಾಕ್ರೆ, ಶರದ್ ಪವಾರ್, ಅಜಿತ್ ಪವಾರ್, ಸಚಿನ್ ಪೈಲಟ್, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಫಾರೂಕ್ ಅಬ್ದುಲ್ಲಾ, ಶಶಿ ತರೂರ್, ಗುಲಾಮ್ ನಬಿ ಆಜಾದ್ ಮುಂತಾದ ಹಿರಿಯ ರಾಜಕಾರಣಿಗಳ ಹೆಸರನ್ನೂ ಬಳಸಿಕೊಳ್ಳಲಾಗಿತ್ತು.
ಈ ಕುರಿತು ಚರ್ಚೆಯಾಗುತ್ತಿದ್ದಂತೆಯೇ ಜಾಲತಾಣದಿಂದ ಹಲವು ಹೇಳಿಕೆಗಳನ್ನು ತೆಗೆದುಹಾಕಲಾಗಿದೆ. ಇದೀಗ 268 ಹೇಳಿಕೆಗಳ ಬದಲು 147 ಹೇಳಿಕೆಗಳನ್ನು ಉಳಿಸಿಕೊಳ್ಳಲಾಗಿದೆ. ಜೊತೆಗೆ ನೆಕ್‌ಬ್ಯಾಂಡನ್ನು ₹1,799 ರ ಬದಲಿಗೆ ₹499ಕ್ಕೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ!