ಮಕ್ಕಳನ್ನು ಒಳಗೊಂಡಿರುವ ಅಶ್ಲೀಲ ಚಿತ್ರಗಳನ್ನು ಹಂಚುವ ರವಾನಿಸುವ ಉದ್ದೇಶವಿರಿಸಿಕೊಂಡು ಇಲ್ಲವೇ ವಾಣಿಜ್ಯ ಲಾಭ ಗಳಿಸುವ ಉದ್ದೇಶದೊಂದಿಗೆ ಡಿಜಿಟಲ್ ಸಾಧನಗಳಲ್ಲಿ ಅಂತಹ ಚಿತ್ರಗಳನ್ನು ವೀಕ್ಷಿಸುವುದು ಮತ್ತು ಸಂಗ್ರಹಿಸುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ- 2012 (ಪೋಕ್ಸೊ ಕಾಯಿದೆ) ಅಡಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ [ಜಸ್ಟ್ ರೈಟ್ ಫಾರ್ ಚಿಲ್ಡ್ರನ್ ಅಲೈಯನ್ಸ್ ಮತ್ತು ಎಸ್ ಹರೀಶ್ ಇನ್ನಿತರರ ನಡುವಣ ಪ್ರಕರಣ].
ಈ ಸಂಬಂಧ ಮದ್ರಾಸ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಪೋಕ್ಸೊ ಕಾಯಿದೆಯ ಸೆಕ್ಷನ್ 15ರ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲು ಅಗತ್ಯವಿರುವ ಉದ್ದೇಶದ ತೀವ್ರತೆಯ ಬಗ್ಗೆ ವಿವರಿಸಿದೆ.
ಪೋಕ್ಸೊ ಕಾಯಿದೆಯ ಸೆಕ್ಷನ್ 15ರ ಉಪ ಸೆಕ್ಷನ್ (1), ಉಪ ಸೆಕ್ಷನ್ (2) ಹಾಗೂ ಉಪ ಸೆಕ್ಷನ್ (3) ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆಗೆ ಸಂಬಂಧಿಸಿದ ಮೂರು ವಿಭಿನ್ನ ಅಪರಾಧಗಳನ್ನು ರೂಪಿಸುತ್ತದೆ ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ.
ಇದೇ ವೇಳೆ ಮಕ್ಕಳ ಅಶ್ಲೀಲ ಚಿತ್ರ ಎಂಬ ಪದ ಬಳಸುವುದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ನ್ಯಾಯಾಲಯ ಸುಗ್ರೀವಾಜ್ಞೆ ಮೂಲಕ ಸಂಸತ್ತು ಪೋಕ್ಸೊ ಕಾಯಿದೆಗೆ ತಿದ್ದುಪಡಿ ತಂದು ಅದನ್ನು ʼಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ವಸ್ತುವಿಷಯʼ ಎಂದು ಹೆಸರಿಸುವಂತೆ ಸಲಹೆ ನೀಡಿತು. ಅಲ್ಲದೆ ಮಕ್ಕಳ ಅಶ್ಲೀಲ ಚಿತ್ರ ಎಂಬ ಪದ ಬಳಸದಂತೆ ಅದು ಎಲ್ಲಾ ನ್ಯಾಯಾಲಯಗಳಿಗೂ ಸೂಚಿಸಿತು.
ಮಕ್ಕಳ ಅಶ್ಲೀಲ ಚಿತ್ರಗಳನ್ನು ಖಾಸಗಿಯಾಗಿ ವೀಕ್ಷಿಸುವುದು ಅಪರಾಧವಲ್ಲ ಎಂಬ ಹೈಕೋರ್ಟ್ ತೀರ್ಪಿನ ವಿರುದ್ಧ ಜಸ್ಟ್ ರೈಟ್ ಫಾರ್ ಚಿಲ್ಡ್ರನ್ ಅಲೈಯನ್ಸ್ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.
ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನದಲ್ಲಿ ಮಕ್ಕಳ ಅಶ್ಲೀಲತೆಯನ್ನು ಡೌನ್‌ಲೋಡ್ ಮಾಡುವುದು ಅಥವಾ ವೀಕ್ಷಿಸುವುದು ಪೋಕ್ಸೊ ಕಾಯಿದೆ ಮತ್ತು ಐಟಿ ಕಾಯಿದೆಯಡಿ ಅಪರಾಧವಾಗುವುದಿಲ್ಲ ಎಂದು ನ್ಯಾ. ಎನ್ ಆನಂದ್ ವೆಂಕಟೇಶ್ ಅವರಿದ್ದ ಮದ್ರಾಸ್ ಹೈಕೋರ್ಟ್ ಪೀಠ ತಿಳಿಸಿತ್ತು.
ತನ್ನ ಮೊಬೈಲ್ ಫೋನ್‌ನಲ್ಲಿ ಮಕ್ಕಳ ಎರಡು ಅಶ್ಲೀಲ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿ ವೀಕ್ಷಿಸಿದ್ದಕ್ಕಾಗಿ ಪೋಕ್ಸೊ ಕಾಯಿದೆ ಮತ್ತು ಐಟಿ ಕಾಯಿದೆಯಡಿಯಲ್ಲಿ ಎಸ್ ಹರೀಶ್ ಎಂಬಾತನ ವಿರುದ್ಧದ ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಈ ಆದೇಶ ನೀಡಿತ್ತು.
ಯುವಕರಲ್ಲಿ ಅಶ್ಲೀಲತೆಯ ವ್ಯಸನ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸಿದ್ದ ಹೈಕೋರ್ಟ್ ಸಮಸ್ಯೆಯನ್ನು ಎದುರಿಸಲು ಮಾನದಂಡದ ವಿಧಾನ ಅಳವಡಿಕೆಗೆ ಕರೆ ನೀಡಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸರ್ಕಾರೇತರ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.
ಮಾರ್ಚ್‌ನಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಹೈಕೋರ್ಟ್‌ನ ಅವಲೋಕನ ಪ್ರಮಾದದಿಂದ ಕೂಡಿದೆ ಎಂದು ಸರ್ವೋಚ್ಚ ನ್ಯಾಯಾಲಯ ಟೀಕಿಸಿತ್ತು.
ಮತ್ತೊಂದೆಡೆ ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಸ್ತುವಿಷಯಗಳು ಆಕಸ್ಮಿಕವಾಗಿ ಅಥವಾ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಿದ್ದರೆ ಅದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ಬಿ(ಬಿ) ಅಡಿ ಅಪರಾಧವಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಈಚೆಗೆ ಹೇಳಿತ್ತು.
ಅಶ್ಲೀಲ ಚಿತ್ರ ವೀಕ್ಷಣೆ ಮತ್ತು ಲೈಂಗಿಕ ಅಪರಾಧಗಳ ನಡುವಿನ ಸಂಬಂಧವನ್ನು ಬಹಿರಂಗಪಡಿಸುವುದಕ್ಕಾಗಿ ದತ್ತಾಂಶ ಸಂಗ್ರಹಿಸಲು ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಬ್ಯೂರೋಗೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2022ರಲ್ಲಿ ತಿರಸ್ಕರಿಸಿತ್ತು.