Ramesh Jarakiholi and Karnataka High Court 
ಸುದ್ದಿಗಳು

ಜಾರಕಿಹೊಳಿ ಪ್ರಕರಣ: ಎಸ್‌ಐಟಿ ಸಿಂಧುತ್ವ, ಬ್ಲ್ಯಾಕ್‌ಮೇಲ್‌ ಪ್ರಕರಣಗಳನ್ನು ರೋಸ್ಟರ್‌ ಪೀಠಕ್ಕೆ ಮರಳಿಸಿದ ಹೈಕೋರ್ಟ್‌

ಹೈಕೋರ್ಟ್‌ನಲ್ಲಿ ಜಾರಕಿಹೊಳಿ ಪ್ರಕರಣದ ಕಾನೂನು ಸಂಘರ್ಷ ಆರಂಭವಾಗಿ ವರ್ಷದ ಬಳಿಕ ಮರಳಿ ರೋಸ್ಟರ್‌ ಪೀಠಕ್ಕೆ ಸಂತ್ರಸ್ತೆಯ ಎರಡು ಮನವಿಗಳನ್ನು ಹಿಂದಿರುಗಿಸಲಾಗಿದ್ದು, ಎಸ್‌ಐಟಿ ವಜಾ ಕೋರಿದ್ದ ಮನವಿಯನ್ನು ಪೀಠ ಇತ್ಯರ್ಥಪಡಿಸಿದೆ.

Siddesh M S

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದರ ಸಿಂಧುತ್ವ ಮತ್ತು ಬೆಂಗಳೂರಿನ ಸದಾಶಿವನಗರದಲ್ಲಿ ಜಾರಕಿಹೊಳಿ ಅವರು ತಮ್ಮ ಆಪ್ತರ ಮೂಲಕ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಆರೋಪ ಒಳಗೊಂಡಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ಸಲ್ಲಿಸಿರುವ ಪ್ರತ್ಯೇಕ ಮನವಿಗಳನ್ನು ನಿಗದಿತ ರೋಸ್ಟರ್‌ ಪೀಠವು ಆಲಿಸಿ ಇತ್ಯರ್ಥಪಡಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಮಹತ್ವದ ಆದೇಶ ಮಾಡಿದೆ. ಹೀಗಾಗಿ, ಹೈಕೋರ್ಟ್‌ನಲ್ಲಿ ಸದರಿ ಪ್ರಕರಣದ ಕಾನೂನು ಸಂಘರ್ಷ ಆರಂಭವಾಗಿ ಸುಮಾರು ಒಂದು ವರ್ಷದ ಬಳಿಕ ಮರಳಿ ರೋಸ್ಟರ್‌ ಪೀಠಕ್ಕೆ ಪ್ರಕರಣ ಹಿಂದಿರುಗಿದಂತಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸಂತ್ರಸ್ತೆಯೇ ಖುದ್ದಾಗಿ ಎಸ್‌ಐಟಿ ರಚನೆಯನ್ನು ಪ್ರಶ್ನಿಸಿರುವುದರಿಂದ ಎಸ್‌ಐಟಿ ವಜಾ ಕೋರಿಕೆಯನ್ನೇ ಒಳಗೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು (ಪಿಐಎಲ್‌) ಬಾಕಿ ಉಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅದನ್ನು ಇತ್ಯರ್ಥಪಡಿಸಿತು.

“ಅಗತ್ಯ ದಾಖಲೆಗಳ ನೆರವಿಗಾಗಿ ಸಂತ್ರಸ್ತೆಯ ಮನವಿಗಳ ಜೊತೆ ಪಿಐಎಲ್‌ ಅನ್ನು ಸೇರಿಸಲಾಗಿದೆ. ಅಗತ್ಯ ಬಿದ್ದಾಗ ಅವುಗಳನ್ನು ಪರಿಶೀಲಿಸಬಹುದಾಗಿದೆ. ಪಿಐಎಲ್‌ನಲ್ಲಿ ವಾದಿಸಿದ್ದ ವಕೀಲ ಜಿ ಆರ್‌ ಮೋಹನ್‌ ಅವರು ನ್ಯಾಯಾಲಯಕ್ಕೆ ಸಹಾಯ ಮಾಡಲು ಅವಕಾಶ ಕಲ್ಪಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದ್ದು, ವಿಚಾರಣೆಯನ್ನು ಸೋಮವಾರಕ್ಕೆ (ಮಾರ್ಚ್‌ 14) ಮುಂದೂಡಿದೆ.

ಇದಕ್ಕೂ ಮುನ್ನ, ವಿಚಾರಣೆ ಆರಂಭವಾಗುತ್ತಿದ್ದಂತೆ ಎಸ್‌ಐಟಿ ರಚನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಮನವಿಯಲ್ಲಿ ಸಂತ್ರಸ್ತೆಯನ್ನು ಪ್ರತಿನಿಧಿಸಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು “ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದ ಹೈಕೋರ್ಟ್‌ ಆದೇಶಕ್ಕೆ ಫೆಬ್ರವರಿ 18ರಂದು ಸುಪ್ರೀಂ ಕೋರ್ಟ್‌ ತಡೆ ನೀಡಿದ್ದು, ಮುಂದಿನ ವಿಚಾರಣೆಯಲ್ಲಿ ಎಸ್‌ಐಟಿ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸಲು ಹೈಕೋರ್ಟ್‌ಗೆ ಆದೇಶ ಮಾಡಿದೆ. ನಿಮ್ಮ ಅನುಮತಿ ಕೋರಿ ಎಸ್‌ಐಟಿ ಅಸಾಂವಿಧಾನಿಕ ಎಂದು ವಾದಿಸಲು ನಾನು ಸಿದ್ಧವಾಗಿದ್ದೇನೆ” ಎಂದು ಪೀಠದ ಗಮನಸೆಳೆದರು.

ಆಗ ಪೀಠವು “ಎಸ್‌ಐಟಿ ರಚನೆ ಮತ್ತು ಸರ್ಕಾರದ ಆದೇಶವನ್ನು ಸಂತ್ರಸ್ತೆ ಪ್ರಶ್ನಿಸಿದ್ದಾರೆ. ಸಂತ್ರಸ್ತೆಯೇ ನ್ಯಾಯಾಲಯದ ಮುಂದೆ ಬಂದಿರುವುದರಿಂದ ಹಾಗೂ ಪಿಐಎಲ್‌ನಲ್ಲೂ ಒಂದೇ ರೀತಿಯ ಕೋರಿಕೆಗಳು ಇರುವುದರಿಂದ ಪಿಐಎಲ್‌ ಬಾಕಿ ಉಳಿಸಿಕೊಳ್ಳುವ ಅಗತ್ಯವಿಲ್ಲ. ಪಿಐಎಲ್‌ ಅನ್ನು ವಜಾ ಮಾಡುವುದಿಲ್ಲ. ಬದಲಿಗೆ ಸಂತ್ರಸ್ತೆಯ ಮನವಿಗಳ ಜೊತೆಯೇ ಪಿಐಎಲ್‌ ಅನ್ನು ರೋಸ್ಟರ್‌ ಪೀಠಕ್ಕೆ ಇತ್ಯರ್ಥಪಡಿಸಲು ರವಾನಿಸಲಾಗುವುದು” ಎಂದರು.

ಜಾರಕಿಹೊಳಿ ಅವರು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿರುವ ಮನವಿಯಲ್ಲಿ ಸಂತ್ರಸ್ತೆಯನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ವಿಕಾಸ್‌ ಸಿಂಗ್‌ ಅವರು “ಸಂತ್ರಸ್ತೆಯ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಸ್‌ಐಟಿ ವರದಿಗೆ ಸಂಬಂಧಿಸಿದಂತೆ ಯಾವುದೇ ಕ್ರಮಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ, ತುರ್ತಾಗಿ ಪ್ರಕರಣವನ್ನು ನಿರ್ಧರಿಸಬೇಕು” ಎಂದು ಕೋರಿದರು.

ವಕೀಲ ಜಿ ಆರ್‌ ಮೋಹನ್‌ ಅವರು “ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಪಿಐಎಲ್‌ ಸಲ್ಲಿಸಿದ್ದಾಗ ಸಂತ್ರಸ್ತೆಯು ಪೀಠದ ಮುಂದೆ ಬಂದಿರಲಿಲ್ಲ. ಅಲ್ಲದೇ, ನಮ್ಮ ಮನವಿಯಲ್ಲಿ ಕೆಲವು ತೀರ್ಪುಗಳನ್ನು ಉಲ್ಲೇಖಿಸಿದ್ದೇವೆ. ಅಗತ್ಯಬಿದ್ದಾಗ ನಾನು ನ್ಯಾಯಾಲಯಕ್ಕೆ ಸಹಾಯ ಮಾಡಲು ಅನುಮತಿಸಬೇಕು” ಎಂದು ಕೋರಿದರು.

ಕಳೆದ ವಿಚಾರಣೆಯಲ್ಲಿ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತೆಯು ಜಾರಕಿಹೊಳಿ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ದೂರಿಗೆ ಸಂಬಂಧಿಸಿದಂತೆ ನಡೆಸಿದ್ದ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ಅನುಮತಿಸಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಸಂತ್ರಸ್ತೆಯು ವಿಚಾರಣಾಧೀನ ನ್ಯಾಯಾಲಯದ ವರದಿಗೆ ತಡೆ ಪಡೆದುಕೊಂಡಿದ್ದು, ಎಸ್ಐಟಿಯ ಸಾಂವಿಧಾನಿಕ ಸಿಂಧುತ್ವ ನಿರ್ಧರಿಸುವ ಆದೇಶ ಪಡೆಯಲು ಯಶಸ್ವಿಯಾಗಿದ್ದರು.

ಪ್ರಕರಣದ ಹಿನ್ನೆಲೆ

ಎಸ್‌ಐಟಿ ಬದಲಿಗೆ ಕೇಂದ್ರೀಯ ತನಿಖಾ ಸಂಸ್ಥೆಗೆ ತನಿಖೆ ವರ್ಗಾಯಿಸುವಂತೆ ಕೋರಿ ಗೀತಾ ಮಿಶ್ರಾ ಎಂಬವರು ವಕೀಲ ಜಿ ಆರ್‌ ಮೋಹನ್‌ ಅವರ ಮೂಲಕ ಮನವಿ ಸಲ್ಲಿಸಿದ್ದರು. ಈಗ ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ಪೀಠವು ಇತ್ಯರ್ಥಪಡಿಸಿದೆ.

ಉಳಿದಂತೆ, ಎಸ್‌ಐಟಿ ವಜಾ ಮಾಡಿ, ಮರು ತನಿಖೆಗೆ ಆದೇಶಿಸುವಂತೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರ ಮೂಲಕ ಸಂತ್ರಸ್ತೆ ಮನವಿ ಸಲ್ಲಿಸಿದ್ದರು. ಇದು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಒಳಪಟ್ಟಿತ್ತು. ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಜಾರಕಿಹೊಳಿ ಅವರ ಆಪ್ತ ಎಂ ವಿ ನಾಗರಾಜ್‌ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಪ್ರಕರಣವನ್ನು ವಜಾ ಮಾಡುವಂತೆ ಸಂತ್ರಸ್ತೆಯು ವಕೀಲ ಸಂಕೇತ್‌ ಏಣಗಿ ಅವರ ಮೂಲಕ ಪ್ರತ್ಯೇಕ ಮನವಿ ಸಲ್ಲಿಸಿದ್ದರು. ಇದು ಮೊದಲಿಗೆ ನ್ಯಾಯಮೂರ್ತಿ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಒಳಪಟ್ಟಿತ್ತು.

ಜುಲೈ 3ರಂದು ವಿಶೇಷ ಆದೇಶದ ಮೂಲಕ ಕೊನೆಯ ಎರಡು ಮನವಿಗಳನ್ನು ಅಂದಿನ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ಒಟ್ಟಿಗೆ ಸೇರಿಸಿಕೊಂಡು ವಿಚಾರಣೆ ನಡೆಸಿಲಾರಂಭಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಪ್ರಕರಣದ ವಿಚಾರಣೆ ನಡೆದುಕೊಂಡು ಬಂದಿದ್ದು, ಈಗ ಸಿಜೆ ಅವಸ್ಥಿ ಅವರು ಸಂತ್ರಸ್ತೆಯ ಎರಡು ಮನವಿಗಳನ್ನು ರೋಸ್ಟರ್‌ ಪೀಠಕ್ಕೆ ವರ್ಗಾಯಿಸಿದ್ದಾರೆ.