[ಜಾರಕಿಹೊಳಿ ಸಿ.ಡಿ ಪ್ರಕರಣ] ಸಂತ್ರಸ್ತೆಯಿಂದ ಮಧ್ಯಪ್ರವೇಶ ಕೋರಿಕೆ; ಯುವತಿಯ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ವಾದ

ಪಿಐಎಲ್‌ಗಳ ಜೊತೆಗೆ ಏಕಸದಸ್ಯ ಪೀಠದ ಮುಂದೆ ಇರುವ ಎರಡು ಪ್ರತ್ಯೇಕ ಮನವಿಗಳನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿಕೊಂಡು ವಿಚಾರಣೆ ನಡೆಸುವಂತೆ ಸಂತ್ರಸ್ತೆ ಸಿಜೆ ಓಕಾ ಅವರಿಗೆ ಮನವಿ ಮಾಡಿದರು. ಇದಕ್ಕೆ ಅರ್ಜಿ ಹಾಕುವಂತೆ ಪೀಠ ಸೂಚಿಸಿದೆ.
Ramesh Jarakiholi and Karnataka High Court
Ramesh Jarakiholi and Karnataka High Court

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ. ಡಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುವಂತೆ ಕೋರಿದ್ದ ಮನವಿ ಮತ್ತು ಹೈಕೋರ್ಟ್‌ ಉಸ್ತುವಾರಿಯಲ್ಲಿ ಪ್ರಕರಣದ ತನಿಖೆ ಮುಂದುವರಿಸುವಂತೆ ಕೋರಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ವಿಚಾರಣೆಯಲ್ಲಿ ತಮ್ಮನ್ನೂ ಪ್ರತಿವಾದಿಯನ್ನಾಗಿಸಬೇಕು ಎಂದು ಸಂತ್ರಸ್ತ ಯುವತಿ ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ಮಧ್ಯಪ್ರವೇಶ ಮನವಿ ಮಾಡಿದರು.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠವು ಸಂತ್ರಸ್ತೆಯ ಮಧ್ಯಪ್ರವೇಶ ಅರ್ಜಿ ಸದ್ಯ ನಮ್ಮ ಮುಂದೆ ಬಂದಿಲ್ಲ ಎಂದಿದ್ದು, ಆ ಮನವಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಆದೇಶಿಸಿದೆ. ಅಲ್ಲದೇ, ಜೂನ್‌ 23ಕ್ಕೆ ವಿಚಾರಣೆ ಮುಂದೂಡಿದೆ.

ಮಹತ್ವದ ಬೆಳವಣಿಗೆಯಲ್ಲಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ಸಂತ್ರಸ್ತೆಯ ಪರವಾಗಿ ಇಂದು ವಿಚಾರಣೆಯಲ್ಲಿ ಭಾಗವಹಿಸಿದ್ದರು. “ಹೈಕೋರ್ಟ್‌ ನಿಗಾದಲ್ಲಿ ತನಿಖೆಯಾಗಬೇಕು ಎಂಬ ಪಿಐಎಲ್‌ ಆಶಯವೇ ನಮ್ಮದೂ ಆಗಿದೆ. ವಿಶೇಷ ತನಿಖಾ ದಳದ (ಎಸ್‌ಐಟಿ) ನಡವಳಿಕೆ ಪ್ರಶ್ನಾರ್ಹವಾಗಿರುವುದರಿಂದ ನಮ್ಮನ್ನು ಆಲಿಸಬೇಕು. ಸಿ.ಡಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎನ್ನಲಾಗಿದೆ. ಪ್ರಕರಣದ ತನಿಖೆಯು ಹೈಕೋರ್ಟ್‌ ನಿಗಾದಲ್ಲಿ ನಡೆಯುತ್ತಿರುವುದರಿಂದ ಎಲ್ಲಾ ವಿಚಾರಗಳನ್ನು ಹೈಕೋರ್ಟ್‌ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳಬೇಕು” ಎಂದು ಜೈಸಿಂಗ್‌ ಅವರು ಪೀಠದ ಗಮನಸೆಳೆದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಸಿ.ಡಿ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ತನಿಖೆಗೆ ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಿದೆ. ನ್ಯಾ. ಸುನಿಲ್‌ ದತ್ತ ಯಾದವ್‌ ಅವರ ಪೀಠದ ಮುಂದಿರುವ ರಿಟ್‌ ಮನವಿಯಲ್ಲಿ ಸಂತ್ರಸ್ತೆಯು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ ತನಿಖೆಯ ಕುರಿತು ನಿಗಾವಹಿಸಬೇಕು ಎಂದು ಕೋರಿ ಇಮೇಲ್‌ ಮೂಲಕ ಬರೆದ ಪತ್ರದ ಬಗ್ಗೆ ಪ್ರಸ್ತಾಪಿಸಿಲ್ಲ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜೈಸಿಂಗ್‌ ಅವರು “ಇದರ ಅಗತ್ಯ ನಿಮಗೆ ಇದೆ ಎಂದಾದರೆ ಸುದೀರ್ಘವಾದ ವಿವರಣೆ ನೀಡಲಾಗುವುದು” ಎಂದರು.

Also Read
ಜಾರಕಿಹೊಳಿ ನಡೆ-ನುಡಿಯಲ್ಲಿ ವೈರುಧ್ಯ ಗುರುತಿಸಿದ ಸಂತ್ರಸ್ತೆ; ಜಾರಕಿಹೊಳಿ, ಎಸ್‌ಐಟಿಗೆ ಹೈಕೋರ್ಟ್‌ ನೋಟಿಸ್‌

ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಪಸ್ಥಿತಿಯಲ್ಲಿ ಜಂಟಿ ಪೊಲೀಸ್‌ ಆಯುಕ್ತರ ಸಹಿಯನ್ನು ಒಳಗೊಂಡ ಸ್ಥಿತಿಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ಮಧ್ಯೆ, ರಮೇಶ್‌ ಜಾರಕಿಹೊಳಿ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಪಿಐಎಲ್‌ಗಳು ನಿರ್ವಹಣೆಗೆ ಅರ್ಹವಾಗಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದಾರೆ.

Also Read
ಜಾರಕಿಹೊಳಿ ಸಿ ಡಿ ಪ್ರಕರಣ: ಎಸ್‌ಐಟಿ ತನಿಖೆಗೆ ಸಂತ್ರಸ್ತೆ ಆಕ್ಷೇಪ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಆರೋಪಿ ಜಾರಕಿಹೊಳಿ ತಮ್ಮ ಆಪ್ತರ ಮೂಲಕ ಬೆಂಗಳೂರಿನ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಬ್ಲ್ಯಾಕ್‌ ಮೇಲ್‌ ಪ್ರಕರಣದ ವಿಚಾರಣೆಗೆ ತಮ್ಮ ರಿಟ್‌ ಮನವಿ ಇತ್ಯರ್ಥವಾಗುವವರೆಗೆ ಮಧ್ಯಂತರ ತಡೆ ನೀಡಬೇಕು ಎಂದು ಸಂತ್ರಸ್ತೆ ಕೋರಿರುವ ಮನವಿಯು ನ್ಯಾಯಮೂರ್ತಿ ಸುನಿಲ್‌ ದತ್ತ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಇದೆ. ಎಸ್‌ಐಟಿ ತನಿಖೆಗೆ ಆಕ್ಷೇಪಿಸಿ ಸಂತ್ರಸ್ತೆ ಸಲ್ಲಿಸಿರುವ ಮತ್ತೊಂದು ಅರ್ಜಿಯು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠದಲ್ಲಿ ವಿಚಾರಣೆಗೆ ಒಳಪಟ್ಟಿದೆ. ಈ ಎರಡೂ ಮನವಿಗಳನ್ನು ಪಿಐಎಲ್‌ಗಳ ಜೊತೆಗೆ ವಿಭಾಗೀಯ ಪೀಠ ಆಲಿಸಬೇಕು ಎಂದು ಸಂತ್ರಸ್ತೆಯ ಪರ ವಕೀಲರು ಕೋರಿದರು. ಇದಕ್ಕೆ ಸಂಬಂಧಿಸಿದಂತೆ ಅರ್ಜಿ ಹಾಕುವಂತೆ ನ್ಯಾಯಾಲಯ ಸೂಚಿಸಿದ್ದು, ವಿಚಾರಣೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com