ಪ್ರಜ್ವಲ್‌ ರೇವಣ್ಣ ಹಗರಣ: ರಾಜ್ಯ ರಾಜಕಾರಣಿಗಳ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸ್ಥಿತಿಗತಿಯ ಮಾಹಿತಿ

ಸಚಿವರಾಗಿದ್ದಾಗಲೇ ಲೈಂಗಿಕ ದೌರ್ಜನ್ಯ ಹಗರಣಗಳು ಹೊರಗೆ ಬಂದ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ, ಎಚ್‌ ವೈ ಮೇಟಿ, ಹರತಾಳು ಹಾಲಪ್ಪ ಹುದ್ದೆ ತೊರೆದಿದ್ದರು. ಈ ಎಲ್ಲಾ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ ಏಕೈಕ ರಾಜಕಾರಣಿ ಹರತಾಳು ಹಾಲಪ್ಪ.
Prajwal Revanna, H D Revanna, Ramesh Jarakiholi and B S Yediyurappa
Prajwal Revanna, H D Revanna, Ramesh Jarakiholi and B S Yediyurappa

ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಿಗೇ ಜೆಡಿಎಸ್‌ ಪಕ್ಷ ಅವರನ್ನು ಅಮಾನತುಗೊಳಿಸಿದೆ. ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ಹಿರಿಯ ಐಪಿಎಸ್‌ ಅಧಿಕಾರಿ ಬಿ ಕೆ ಸಿಂಗ್‌ ನೇತೃತ್ವದಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಏಪ್ರಿಲ್‌ 28ರಂದು ರಚಿಸಿ, ವಿಚಾರಣೆಗೆ ಆದೇಶಿಸಿದೆ. ಈ ಹಿಂದೆ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿಯವರ ವಿರುದ್ಧ ಕೇಳಿ ಬಂದಿದ್ದ ಅಶ್ಲೀಲ ಸಿ ಡಿ ಪ್ರಕರಣದ ತನಿಖೆಗಾಗಿ ಅಂದಿನ ಬಿಜೆಪಿ ಸರ್ಕಾರ ಎಸ್‌ಐಟಿ ರಚಿಸಿದ್ದನ್ನು ಇಲ್ಲಿ ನೆನೆಯಬಹುದು.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರಿಬ್ಬರು ನೀಡಿದ ದೂರಿನ ಅನ್ವಯ ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್‌ ರೇವಣ್ಣ ಮತ್ತು ಅವರ ತಂದೆ ಮಾಜಿ ಸಚಿವ ಎಚ್‌ ಡಿ ರೇವಣ್ಣ ವಿರುದ್ಧ ಏಪ್ರಿಲ್‌ 28ರಂದು ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 354(ಎ), 354(ಡಿ), 506, 509 ಅಡಿ ಎಫ್‌ಐಆರ್‌ ಸಹ ದಾಖಲಾಗಿದೆ.

ರಾಜ್ಯ ರಾಜಕಾರಣದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಸದ್ದು ಮಾಡಿರುವುದು, ಸುದ್ದಿಯಾಗಿರುವುದು ಇದೇ ಮೊದಲೇನಲ್ಲ. ಕಳೆದ ಎರಡು ದಶಕಗಳಲ್ಲಿ ಅನೇಕ ಪ್ರಭಾವಿ ರಾಜಕಾರಣಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗಿವೆ, ಕಟಕಟೆಯನ್ನೂ ಏರಿವೆ. ಸಚಿವರಾಗಿದ್ದಾಗಲೇ ಲೈಂಗಿಕ ದೌರ್ಜನ್ಯ ಹಗರಣಗಳು ಹೊರಗೆ ಬಂದ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ, ಎಚ್‌ ವೈ ಮೇಟಿ, ಹರತಾಳು ಹಾಲಪ್ಪ ಅಧಿಕಾರ ಕಳೆದುಕೊಂಡಿದ್ದೂ ಉಂಟು.

ಈ ಪೈಕಿ ಕೆಲವರು ಕಾನೂನು ಪ್ರಕ್ರಿಯೆ ಎದುರಿಸುತ್ತಿದ್ದು, ಹಲವರು ನ್ಯಾಯಾಲಯದಿಂದ ಪ್ರತಿಬಂಧಕಾದೇಶ ಪಡೆಯುವ ಮೂಲಕ ತಮ್ಮ ವಿರುದ್ಧದ ಹಗರಣಗಳು ಮಾಧ್ಯಮಗಳ ಮೂಲಕ ಹೊರಬರದಂತೆ ನೋಡಿಕೊಂಡಿದ್ದಾರೆ. ಹಾಲಪ್ಪ ಅವರನ್ನು ನ್ಯಾಯಾಲಯ ಆರೋಪ ಮುಕ್ತಗೊಳಿಸಿದ್ದು, ಇನ್ನು ಕೆಲ ಪ್ರಕರಣಗಳು ನ್ಯಾಯಾಲಯದ ಹೊರಗೆ ಸಂಧಾನದಲ್ಲಿ ಮುಕ್ತಾಯ ಕಂಡಿದ್ದೂ ಇದೆ. ಈ ಎಲ್ಲಾ ಪ್ರಮುಖ ಪ್ರಕರಣಗಳ ಇಣುಕು ನೋಟ ಇಲ್ಲಿದೆ.

ಪೋಕ್ಸೊ ಪ್ರಕರಣದ ಆರೋಪಿ ಬಿ ಎಸ್‌ ಯಡಿಯೂರಪ್ಪ

ಕಳೆದ ತಿಂಗಳು ರಾಜ್ಯ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ಮಹಿಳೆಯೊಬ್ಬರು ತನ್ನ ಅಪ್ರಾಪ್ತ ಪುತ್ರಿಯ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೆರವು ಕೋರಲು ಹೋದಾಗ ಯಡಿಯೂರಪ್ಪ ಅವರು ಪುತ್ರಿಯನ್ನು ಖಾಸಗಿ ಕೊಠಡಿಗೆ ಕರೆದೊಯ್ದು ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿದ್ದರು. ಈ ಸಂಬಂಧ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಮಾರ್ಚ್‌ 14ರಂದು ದೂರು ದಾಖಲಾಗಿದ್ದು, ಪೋಕ್ಸೊ ಕಾಯಿದೆ ಸೆಕ್ಷನ್‌ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್‌ 354 (ಎ) ಅಡಿ (ಲೈಂಗಿಕ ಕಿರುಕುಳ) ಯಡಿಯೂರಪ್ಪ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಸಂತ್ರಸ್ತೆಯು ಪ್ರಕರಣದ ಸಂಬಂಧ ವಿಚಾರಣಾಧೀನ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 164 ಅಡಿ ಹೇಳಿಕೆಯನ್ನೂ ದಾಖಲಿಸಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆ ವಹಿಸಿ ಆದೇಶ ಮಾಡಿದ್ದು, ವಿಚಾರಣೆ ಚಾಲ್ತಿಯಲ್ಲಿದೆ.

ಅತ್ಯಾಚಾರ ಆರೋಪ ಎದುರಿಸುತ್ತಿರುವ ರಮೇಶ್‌ ಜಾರಕಿಹೊಳಿ

ಯುವತಿಯೊಬ್ಬರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯ ಜೊತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಖಾಸಗಿಯಾಗಿದ್ದ ಕ್ಷಣಗಳ ಸಿ ಡಿ ಮಾಧ್ಯಮಗಳಲ್ಲಿ 2021ರಲ್ಲಿ ಪ್ರಸಾರವಾಗುವ ಮೂಲಕ ಭಾರಿ ಸಂಚಲನ ಸೃಷ್ಟಿಸಿತ್ತು. ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಸಂತ್ರಸ್ತೆ ನೀಡಿದ ದೂರಿನ ಅನ್ವಯ ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ರಮೇಶ್‌ ಜಾರಕಿಹೊಳಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 376ಸಿ (ಅತ್ಯಾಚಾರ), 354ಎ (ಮಹಿಳೆಯ ಮಾನಹಾನಿ), 506 (ಜೀವ ಬೆದರಿಕೆ), 417 (ವಂಚನೆ), ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67 (ಅಶ್ಲೀಲ ವಿಡಿಯೋ ಹರಿಬಿಟ್ಟ ಆರೋಪ) ಅಡಿ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೆ ಪ್ರತಿಯಾಗಿ, ರಮೇಶ್‌ ಜಾರಕಿಹೊಳಿ ಅವರು ತಮ್ಮ ಆಪ್ತರ ಮೂಲಕ ತನ್ನನ್ನು ಬ್ಲ್ಯಾಕ್‌ಮೇಲ್‌ ಮತ್ತು ಹನಿಟ್ರ್ಯಾಪ್‌ ಮಾಡಲಾಗಿದೆ ಎಂದು ಆರೋಪಿಸಿ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಅನ್ವಯ ಪತ್ರಕರ್ತ ನರೇಶ್‌ ಮತ್ತು ಶ್ರವಣ್‌ ಎಂಬ ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 385, 465, 469 120-B ಜೊತೆಗೆ 34 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್‌ 67ರ ಅಡಿ ಪ್ರಕರಣ ದಾಖಲಿಸಲಾಗಿದೆ.

ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ರಮೇಶ್‌ ಜಾರಕಿಹೊಳಿ ಕೋರಿಕೆ ಆಧರಿಸಿ ಅಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದರು. ದೂರು-ಪ್ರತಿದೂರುಗಳ ವಿಚಾರಣೆಯನ್ನು ಎಸ್‌ಐಟಿಗೆ ವಹಿಸಲಾಗಿತ್ತು. ಎಸ್‌ಐಟಿ ರಚಿಸುವಾಗ ರಮೇಶ್‌ ಜಾರಕಿಹೊಳಿ ದೂರು ನೀಡಿರಲಿಲ್ಲ. ಅದಾಗ್ಯೂ, ಅದನ್ನು ಎಸ್‌ಐಟಿಗೆ ವರ್ಗಾಯಿಸಲಾಗಿದೆ. ಹೀಗಾಗಿ, ಎಸ್‌ಐಟಿ ರಚನೆಯೇ ಕಾನೂನುಬಾಹಿರ ಎಂದು ಅದರ ಸಿಂಧುತ್ವವನ್ನು ಪ್ರಶ್ನಿಸಿ ಸಂತ್ರಸ್ತೆಯು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಈ ಮಧ್ಯೆ, ಸಂತ್ರಸ್ತೆ ನೀಡಿದ್ದ ದೂರಿಗೆ ಸಂಬಂಧಿಸಿದ ಆರೋಪ ಪಟ್ಟಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲು ಎಸ್‌ಐಟಿಗೆ ಹೈಕೋರ್ಟ್‌ ಸಮ್ಮತಿಸಿತ್ತು. ಇದಕ್ಕೆ ಆಕ್ಷೇಪಿಸಿದ್ದ ಸಂತ್ರಸ್ತೆಯು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ, ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ಸಿಂಧುತ್ವ ನಿರ್ಧಾರವಾಗುವವರೆಗೆ ಆರೋಪ ಪಟ್ಟಿ ಸ್ವೀಕರಿಸದಂತೆ ಆದೇಶಿಸಬೇಕು ಎಂದು ಕೋರಿದ್ದರು. ಇದನ್ನು ಪುರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಎಸ್‌ಐಟಿ ರಚನೆಯ ಸಿಂಧುತ್ವ ನಿರ್ಧರಿಸುವಂತೆ ಹೈಕೋರ್ಟ್‌ಗೆ ಆದೇಶಿಸಿತ್ತು.

ಈ ಸಂಬಂಧ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಎಲ್ಲಾ ಪಕ್ಷಕಾರರಿಗೂ ಪ್ರಕರಣದ ಮಾಹಿತಿ, ವಾದದ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವಂತೆ ನಿರ್ದೇಶಿಸಿ, ಅಂತಿಮ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಆದರೆ, ರಾಜ್ಯ ಸರ್ಕಾರ ಇದುವರೆಗೂ ತನ್ನ ವಾದಾಂಶ ಮತ್ತಿತರ ಮಾಹಿತಿಯನ್ನು ಹಂಚಿಕೊಳ್ಳದ ಹಿನ್ನೆಲೆಯಲ್ಲಿ 2023ರ ಡಿಸೆಂಬರ್‌ 19ರಂದು ಚಳಿಗಾಲದ ರಜೆಯ ಬಳಿಕ ವಿಚಾರಣೆಗೆ ಪಟ್ಟಿ ಮಾಡುವಂತೆ ಆದೇಶಿಸಿತ್ತು. ಪ್ರಕರಣ ಇದುವರೆಗೂ ವಿಚಾರಣೆಗೆ ಬಂದಿಲ್ಲ. 2021ರ ಜೂನ್‌ 7ರಂದು ಎಸ್‌ಐಟಿ ಸಿಂಧುತ್ವದ ರಚನೆಯನ್ನು ಪ್ರಶ್ನಿಸಲಾಗಿತ್ತು. ಮೂರು ವರ್ಷಗಳಾದರೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿಲ್ಲ.

Hartalu Halappa, H Y Meti, Aravind Limbavali and M P Renukacharya
Hartalu Halappa, H Y Meti, Aravind Limbavali and M P Renukacharya

ಹರತಾಳು ಹಾಲಪ್ಪ ಖುಲಾಸೆ

ಶಿವಮೊಗ್ಗದ ವಿನೋಬಾನಗರದಲ್ಲಿ ಸ್ನೇಹಿತನ ಪತ್ನಿಯ ಮೇಲೆ 2009ರ ನವೆಂಬರ್‌ 26ರಂದು ಅತ್ಯಾಚಾರ ಎಸಗಿದ ಆರೋಪದಲ್ಲಿ ಬಿಜೆಪಿ ಮಾಜಿ ಶಾಸಕ ಹಾಗೂ ಅಂದಿನ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹರತಾಳು ಹಾಲಪ್ಪ ವಿರುದ್ಧ 2010ರ ಮೇನಲ್ಲಿ ದೂರು ದಾಖಲಾಗಿತ್ತು. ಆರೋಪ ಕೇಳಿಬರುತ್ತಲೇ ಅವರು ಸಚಿವ ಸ್ಥಾನ ತೊರೆದಿದ್ದರು. ಪ್ರಕರಣವನ್ನು ಅಂದಿನ ಯಡಿಯೂರಪ್ಪ ಸರ್ಕಾರ ಸಿಐಡಿಗೆ ವಹಿಸಿತ್ತು. 2010ರ ಮೇ 10ರಂದು ಹಾಲಪ್ಪ ಬಂಧನವಾಗಿತ್ತು.

ಭೋಜನಕ್ಕೆ ಮನೆಗೆ ಬಂದಿದ್ದ ಹಾಲಪ್ಪ ಅವರು ತನ್ನನ್ನು ಔಷಧ ತರಲು ಹೊರಗೆ ಕಳುಹಿಸಿ ಪತ್ನಿಯನ್ನು ಅತ್ಯಾಚಾರ ಮಾಡಿದ್ದರು ಎಂದು ಪತಿ ದೂರು ನೀಡಿದ್ದರು. ಸುದೀರ್ಘ ಕಾನೂನು ಪ್ರಕ್ರಿಯೆ ಬಳಿಕ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ 2017ರ ಆಗಸ್ಟ್‌ 18ರಂದು ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತ್ತು. ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿಲ್ಲ.

ಎಚ್‌ ವೈ ಮೇಟಿಗೆ ಕ್ಲೀನ್‌ಚಿಟ್‌

2013-2018ರ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಬಾಗಲಕೋಟೆ ಶಾಸಕ ಎಚ್‌ ವೈ ಮೇಟಿ ಅವರದ್ದು ಎನ್ನಲಾದ ಮಹಿಳೆಯ ಜೊತೆಗಿನ ಖಾಸಗಿ ಕ್ಷಣಗಳ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆಯುಷ್‌ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸದಲ್ಲಿದ್ದ ಮಹಿಳೆಯ ಜೊತೆ ಮೇಟಿ ಸಲ್ಲಾಪದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾದ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಅವರು ಸಚಿವ ಸ್ಥಾನ ತೊರೆದಿದ್ದರು.

ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಪ್ರಕರಣ ದಾಖಲಿಸಿದ್ದ ಮಹಿಳೆ ದೂರು ಹಿಂಪಡೆದಿದ್ದರು. ಆನಂತರ ರಾಜ್ಯ ಸರ್ಕಾರವು ನೇಮಿಸಿದ್ದ ಸಿಐಡಿ ತಂಡವು ಪ್ರಕರಣದಲ್ಲಿ ಮೇಟಿ ಅವರಿಗೆ ಕ್ಲೀನ್‌ಚಿಟ್‌ ನೀಡಿತ್ತು.

ಅರವಿಂದ ಲಿಂಬಾವಳಿ ಪಾರು

ಬಿಜೆಪಿಯ ಮಹದೇವಪುರ ಶಾಸಕರಾಗಿದ್ದ ಅರವಿಂದ ಲಿಂಬಾವಳಿ ಪುರುಷರೊಬ್ಬರೊಂದಿಗೆ ಖಾಸಗಿಯಾಗಿದ್ದ ಕ್ಷಣಗಳ ವಿಡಿಯೋ 2019ರಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯವು ಆರೋಪಿತ ಸೆಕ್ಸ್‌ ಟೇಪ್‌ ನಕಲಿ ಎಂದು ಪೊಲೀಸರಿಗೆ ವರದಿ ನೀಡಿತ್ತು. ಆನಂತರ ಈ ಪ್ರಕರಣದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ.

ರೇಣುಕಾಚಾರ್ಯ ಪ್ರಕರಣ ಸುಖಾಂತ್ಯ

2007ರಲ್ಲಿ ಆಸ್ಪತ್ರೆಯೊಂದರ ಶುಶ್ರೂಷಕಿಯಾಗಿದ್ದ ಜಯಲಕ್ಷ್ಮಿ ಎಂಬವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಎಂ ಪಿ ರೇಣುಕಾಚಾರ್ಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ತನಗೆ ಮತ್ತು ರೇಣುಕಾಚಾರ್ಯರಿಗೆ ಸಂಬಂಧವಿದೆ ಎಂಬುದಕ್ಕೆ ಪೂರಕವಾಗಿ ಆಕೆಗೆ ರೇಣುಕಾಚಾರ್ಯ ಮುತ್ತಿಡುವ ಫೋಟೊಗಳನ್ನು ಬಿಡುಗಡೆ ಮಾಡಿದ್ದರು. ಪ್ರಕರಣ ನ್ಯಾಯಾಲಯದ ಹೊರಗೆ ಇತ್ಯರ್ಥವಾಗಿತ್ತು.

S A Ramadas
S A Ramadas

ಬ್ರಹ್ಮಚಾರಿ ರಾಮದಾಸ್‌ಗೆ ಗೃಹಿಣಿ ಕಾಟ

ಬ್ರಹ್ಮಚಾರಿಯಾದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎಸ್‌ ಎ ರಾಮದಾಸ್‌ ಅವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು 2014ರಲ್ಲಿ ದೂರು ನೀಡಿದ್ದರು. ರಾಮದಾಸ್‌ ತನ್ನನ್ನು ಗುಪ್ತವಾಗಿ ಮದುವೆಯಾಗಿದ್ದಾರೆ ಎಂದು ಆಕೆ ಆರೋಪಿಸಿದ್ದರು. ಈ ನಡುವೆ ರಾಮದಾಸ್‌ ಆತ್ಮಹತ್ಯೆಗೆ ಯತ್ನಿಸಿದ್ದು ವರದಿಯಾಗಿತ್ತು. ಮುಂದೆ 2018ರಲ್ಲಿ ರಾಮದಾಸ್‌ ನಿವಾಸದ ಮುಂದೆ ಪ್ರಕರಣದಲ್ಲಿನ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳದಲ್ಲಿದ್ದ ಪೊಲೀಸರು ಆಕೆಯನ್ನು ರಕ್ಷಿಸಿದ್ದು ಸಹ ಸುದ್ದಿಯಾಗಿತ್ತು. ಆನಂತರ ಯಾವುದೇ ಬೆಳವಣಿಗೆ ವರದಿಯಾಗಿಲ್ಲ.

Tejaswi Surya, Pratap Simha, B V Srinivas
Tejaswi Surya, Pratap Simha, B V Srinivas

ಬಿ ವಿ ಶ್ರೀನಿವಾಸ್‌ ವಿರುದ್ಧದ ಪ್ರಕರಣ

ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ಮಾತುಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷೆ ಬಿ ವಿ ಶ್ರೀನಿವಾಸ್‌ ವಿರುದ್ಧ ಅವರ ಮಾಜಿ ಸಹೋದ್ಯೋಗಿ ಹಾಗೂ ಅಸ್ಸಾಂ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆಯೊಬ್ಬರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಶ್ರೀನಿವಾಸ್‌ಗೆ ಸುಪ್ರೀಂ ಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಪ್ರಕರಣ ವಿಚಾರಣಾ ಹಂತದಲ್ಲಿದೆ.

ಪ್ರತಿಬಂಧಕಾದೇಶದ ಮೊರೆ

ಯುವತಿಯರೊಂದಿಗೆ ಅಸಭ್ಯ ವರ್ತನೆ, ದೌರ್ಜನ್ಯ ಹಾಗೂ ಅಶ್ಲೀಲ ಚಾಟಿಂಗ್‌ ವಿಡಿಯೊಗಳ ಆರೋಪಗಳು ಸದ್ದು ಮಾಡುತ್ತಿದ್ದ ಹಿನ್ನೆಲೆಯಲ್ಲಿ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ‌ ಹಾಗೂ ಮೈಸೂರು-ಕೊಡಗು ಲೋಕಸಭಾ ಸದಸ್ಯ ಬಿಜೆಪಿಯ ಪ್ರತಾಪ್‌ ಸಿಂಹ ತಮ್ಮ ವಿರುದ್ಧ ಯಾವುದೇ ಆಕ್ಷೇಪಾರ್ಹ ಸುದ್ದಿ, ವಿಡಿಯೋ ಪ್ರಕಟಿಸದಂತೆ ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ ಪಡೆದುಕೊಂಡಿದ್ದರು.

ಆನಂತರ, 2018ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಮಾಜಿ ಸಚಿವ ಡಾ. ಕೆ. ಸುಧಾಕರ್‌, ಹಾಲಿ ಶಾಸಕರಾದ ಮುನಿರತ್ನ, ಬಿ ಎ ಬಸವರಾಜು, ಶಿವರಾಮ್‌ ಹೆಬ್ಬಾರ್‌, ಗೋಪಾಲಯ್ಯ ಸೇರಿ 10 ಶಾಸಕರು ತಮ್ಮ ವಿರುದ್ಧ ಆಕ್ಷೇಪಾರ್ಹವಾದ ಸುದ್ದಿ ಮತ್ತು ವಿಡಿಯೊವನ್ನು ಪ್ರಸಾರ ಮಾಡದಂತೆ ಬೆಂಗಳೂರು ನ್ಯಾಯಾಲಯದಿಂದ ಪ್ರತಿಬಂಧಕಾದೇಶ ಪಡೆದುಕೊಂಡಿದ್ದರು.

Kannada Bar & Bench
kannada.barandbench.com