Karnataka HC and 2021

 
ಸುದ್ದಿಗಳು

[ಹಿನ್ನೋಟ] ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ ಪ್ರಮುಖ ಪ್ರಕರಣಗಳು

ರಾಜ್ಯ ಸರ್ಕಾರವು ಕಳೆದ ಒಂದು ವರ್ಷದಲ್ಲಿ ಜಾರಿಗೊಳಿಸಿರುವ ವಿವಿಧ ಕಾನೂನು, ಆದೇಶಗಳ ಸಾಂವಿಧಾನಿಕ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಇವು ರಾಜಕೀಯ ಸೂಕ್ಷ ಪ್ರಕರಣಗಳಾಗಿದ್ದು ಸರ್ಕಾರದ ವರ್ಚಸ್ಸಿನ ಮೇಲೆ ಪರಿಣಾಮ ಬೀರಲಿವೆ.

Siddesh M S

ಜನಹಿತಕ್ಕಿಂತ ಮಿಗಿಲಾಗಿ ಸೈದ್ಧಾಂತಿಕ ಮತ್ತು ರಾಜಕೀಯ ಉದ್ದೇಶಕ್ಕಾಗಿ ವಿವೇಚನಾರಹಿತವಾಗಿ ಕಾನೂನುಗಳನ್ನು ಜಾರಿಗೆ ತರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಬೆಳವಣಿಗೆ ಎನ್ನುವಂತಾಗಿದೆ. ಶಾಸನಸಭೆಯಲ್ಲಿ ಕಾನೂನಿನ ಸಾಧಕ-ಬಾಧಕ ಚರ್ಚೆಯಾಗದೇ ಬಹುಮತದ ಆಧಾರದಲ್ಲಿ ಜಾರಿಗೆ ತಂದ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸಲು ಒಂದೋ ನ್ಯಾಯಾಲಯಗಳ ಮೆಟ್ಟಿಲೇರಬೇಕು, ಇಲ್ಲವಾದರೆ ಅಂತಹ ಕಾನೂನನ್ನು ವಿರೋಧಿಸಿದ ವಿಪಕ್ಷಗಳು ರಾಜಕೀಯ ಅಧಿಕಾರ ಪಡೆದು ಆಕ್ಷೇಪಿತ ಕಾನೂನನ್ನು ಹಿಂಪಡೆಯಬೇಕು. ಎರಡನೇ ಸಾಧ್ಯತೆಯು ಜನಮತದ ಮೇಲೆ ನಿರ್ಧಾರವಾಗಲಿರುವುದರಿಂದ ತುರ್ತಾಗಿ ಉಳಿಯುವ ಏಕೈಕ ಹಾದಿ ನ್ಯಾಯಾಲಯದ ಕದ ತಟ್ಟುವುದಾಗಿರುತ್ತದೆ.

ಕರ್ನಾಟಕದಲ್ಲಿಯೂ ಸನ್ನಿವೇಶ ಭಿನ್ನವಾಗಿಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕಳೆದ ಒಂದು ವರ್ಷದಲ್ಲಿ ಜಾರಿಗೊಳಿಸಿರುವ ಅನೇಕ ಕಾನೂನು, ಆದೇಶಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಲವು ಮನವಿಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವಿವಿಧ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ, ರಿಟ್‌ ರೂಪದಲ್ಲಿ ಸಲ್ಲಿಸಿವೆ. ಕೆಲವು ಮನವಿಗಳ ವಿಚಾರಣೆಯು ನ್ಯಾಯಾಲಯದ ವಿವಿಧ ಹಂತದಲ್ಲಿದ್ದು, ಕೆಲವು ಮನವಿಗಳ ಕುರಿತಾದ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿದೆ. ಇವುಗಳ ಪಟ್ಟಿ ಇಂತಿದೆ.

ಜಾರಕಿಹೊಳಿ ಪ್ರಕರಣ: ಎಸ್‌ಐಟಿ ರಚನೆ ಪ್ರಶ್ನೆ

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ, ರಾಷ್ಟ್ರೀಯ ಮಾಧ್ಯಮಗಳಲ್ಲಿ 'ಉದ್ಯೋಗಕ್ಕಾಗಿ ಸೆಕ್ಸ್‌' ಎಂದೇ ಬಿಂಬಿತವಾದ ರಮೇಶ್‌ ಜಾರಕಿಹೊಳಿ ಸಿಡಿ ಹಗರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಮನವಿಗಳನ್ನು ಒಟ್ಟುಗೂಡಿಸಿ ಕರ್ನಾಟಕ ಹೈಕೋರ್ಟ್‌ ವಿಚಾರಣೆ ನಡೆಸುತ್ತಿದೆ.

ಈ ಮನವಿಗಳ ಪೈಕಿ ಅತ್ಯಾಚಾರ ಸಂತ್ರಸ್ತೆಯು ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿರುವುದರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಮನವಿ ಸಲ್ಲಿಸಿದ್ದಾರೆ. ಅಂದಿನ ಗೃಹ ಸಚಿವರಾಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೋಪಿಯಾದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಕೋರಿಕೆಯ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಲು ಬೆಂಗಳೂರು ಪೊಲೀಸ್‌ ಕಮಿಷನರ್‌ಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ರಚಿಸಲಾಗಿದೆ.

ಎಸ್‌ಐಟಿ ರಚನೆ ಆದೇಶ ಹೊರಡಿಸಲು ಸೂಚನೆ ನೀಡುವ ಅಧಿಕಾರ ಗೃಹ ಸಚಿವರಿಗೆ ಇಲ್ಲ. ಹೀಗಾಗಿ, ಎಸ್‌ಐಟಿ ರಚನೆಯು ಕಾನೂನುಬಾಹಿರವಾಗಿದೆ. ಮೊದಲಿಗೆ ಎಸ್‌ಐಟಿಯ ಸಾಂವಿಧಾನಿಕ ಸಿಂಧುತ್ವ ವಿಚಾರ ನಿರ್ಧಾರವಾಗಬೇಕು. ಅಲ್ಲಿಯವರೆಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಎಸ್‌ಐಟಿಗೆ ಅವಕಾಶ ಮಾಡಿಕೊಡಬಾರದು ಎಂದು ಸಂತ್ರಸ್ತೆ ಪರ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ಪಟ್ಟು ಹಿಡಿದಿದ್ದಾರೆ.

Ramesh Jarakiholi and Karnataka High Court

ಗೋಹತ್ಯೆ ನಿಷೇಧ ಕಾಯಿದೆ

‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ-2020’ರ ಸೆಕ್ಷನ್‌ 5 ಅನ್ನು ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ವಿಲೇವಾರಿ ಮಾಡಿದ ಬಳಿಕ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಕುರಿತಾದ ವಾದ ಆಲಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. ಗೋಹತ್ಯೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರವನ್ನು ಸೆಕ್ಷನ್‌ 5ರಲ್ಲಿ ಅಡಕಗೊಳಿಸಲಾಗಿದೆ.

ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್, ಕಸಾಯಿ ಖಾನೆ ಮಾಲೀಕರು ಮತ್ತು ಗೋಮಾಂಸ ಮಾರಾಟಗಾರರು ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ನಡೆಸುತ್ತಿದೆ.

ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆ

ಆನ್‌ಲೈನ್‌ ಜೂಜಾಟ ನಿಷೇಧಿಸುವ ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳಿಗೆ ಸಂಬಂಧಿಸಿದ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಕಾಯ್ದಿರಿಸಿದೆ.

ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಒಳಗೊಂಡು ಇತರೆ ಖಾಸಗಿ ಕಂಪೆನಿಗಳು ಸಲ್ಲಿಸಿರುವ ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ನೇತೃತ್ವದ ವಿಭಾಗೀಯ ಪೀಠವು ಪಕ್ಷಕಾರರಿಗೆ ಲಿಖಿತ ವಾದವನ್ನು ಸಲ್ಲಿಸುವಂತೆ ಆದೇಶಿಸಿದೆ.

ಪೋಕರ್‌, ಚೆಸ್‌, ರಮ್ಮಿ, ಫ್ಯಾಂಟಸಿ ಆಟಗಳು (ಫ್ಯಾಂಟಸಿ ಕ್ರಿಕೆಟ್‌, ಫುಟ್‌ಬಾಲ್‌ ಮತ್ತು ಬ್ಯಾಸ್ಕೆಟ್‌ಬಾಲ್‌), ತಾತ್ಕಾಲಿಕ ಆಟಗಳು ಮತ್ತು ಇ-ಕ್ರೀಡೆಗಳು ಕೌಶಲ್ಯ ಸಂಬಂಧಿಸಿದ್ದಾಗಿವೆ ಎಂದು ಹಲವು ನ್ಯಾಯಾಲಯಗಳು ಹೇಳಿವೆ. ಕೆಲವು ಆಟಗಳು ಹಣದ ಅಪಾಯವನ್ನು ಒಳಗೊಂಡಿವೆಯಾದರೂ ಅವು ಜೂಜಾಟಕ್ಕೆ ಸಂಬಂಧಿಸಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

ಆನ್‌ಲೈನ್‌ ಜೂಜಾಟ ಇಂದು ಸಾಮಾಜಿಕ ಪಿಡುಗಾಗಿ ಪರಿಣಿಮಿಸಿದ್ದು, ಅದನ್ನು ಹತ್ತಿಕ್ಕುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಕಾಯಿದೆಗೆ ತಿದ್ದುಪಡಿ ತರಲಾಗಿದೆ ಎಂದು ರಾಜ್ಯ ಸರ್ಕಾರವು ಕಾಯಿದೆಯನ್ನು ಸಮರ್ಥಿಸಿದೆ.

Karnataka HC and Online games

ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚನೆ

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆಗೆ ತಿದ್ದುಪಡಿ ತಂದಿರುವುದರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ರಾಜ್ಯ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯಿದೆ-2021 ಅನ್ನು ರೂಪಿಸಿದ್ದು, ಅದಕ್ಕೆ ರಾಜ್ಯಪಾಲರ ಅಂಕಿತ ಹಾಕಿದ ಹಿನ್ನೆಲೆಯಲ್ಲಿ 2021ರ ಸೆಪ್ಟೆಂಬರ್‌ 18ರಂದು ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದೆ. ತಿದ್ದುಪಡಿ ಕಾಯಿದೆಯಿಂದ ಮೀಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ವಾಪಸ್ ಪಡೆಯಲಾಗಿದೆ. ಮೀಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಿಗದಿಪಡಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಸೀಮಾ ಆಯೋಗ ರಚನೆ ಮಾಡಲು ಸರ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ರಾಜ್ಯ ಸರ್ಕಾರದ ಈ ಕ್ರಮ ಪಂಚಾಯತಿ ಕಚೇರಿಗಳ ಅಧಿಕಾರವಧಿ ಪೂರ್ಣಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕೆಂಬುದನ್ನು ಪ್ರತಿಪಾದಿಸುವ ಸಂವಿಧಾನದ ಪರಿಚ್ಛೇದ 243 ಇ(3)ರ ಸ್ಪಷ್ಟ ಉಲ್ಲಂಘನೆಯಾಗಿದೆ. ಆಯೋಗ ಹೊರಡಿಸಿದ ನೋಟಿಫಿಕೇಷನ್‌ಗಳು ತಿದ್ದುಪಡಿ ಕಾಯಿದೆ ಜಾರಿಯಿಂದ ರದ್ದಾಗಿದ್ದು, ಹೊಸ ಪ್ರಕ್ರಿಯೆ ಕೈಗೊಂಡು ಚುನಾವಣೆ ಪೂರ್ಣಗೊಳಿಸಲು ಕನಿಷ್ಠ ಒಂದು ಅಥವಾ ಒಂದೂವರೆ ವರ್ಷ ಬೇಕಾಗುತ್ತದೆ. ಆದ್ದರಿಂದ ತಿದ್ದುಪಡಿ ಕಾಯಿದೆಯನ್ನು ರದ್ದುಪಡಿಸಬೇಕು. ಅಂತಿಮ ಮೀಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪಟ್ಟಿ ಪ್ರಕಟಿಸಿ ಶೀಘ್ರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಜಾತಿಯಾಧಾರಿತ ನಿಗಮ, ಮಂಡಳಿಗಳು

ಜಾತಿಯಾಧಾರಿತ ನಿಗಮ ಮತ್ತು ಮಂಡಳಿಗಳನ್ನು ರಚಿಸಿರುವುದು ಸಂವಿಧಾನದಲ್ಲಿ ಮಿಳಿತವಾಗಿರುವ ಜಾತ್ಯತೀತ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ಪರಿಶೀಲಿಸುವುದಾಗಿ ಕರ್ನಾಟಕ ಹೈಕೋರ್ಟ್‌ ಹೇಳಿದೆ. ಅಲ್ಲದೇ, ಮನವಿಗಳ ನಿರ್ವಹಣೆಯ ಕುರಿತು ರಾಜ್ಯ ಸರ್ಕಾರ ಎತ್ತಿದ್ದ ಪ್ರಾಥಮಿಕ ತಕರಾರನ್ನು ವಜಾ ಮಾಡಿರುವ ಪೀಠವು ಅಂತಿಮ ವಿಚಾರಣೆಗೆ ಅಸ್ತು ಎಂದಿರುವುದರಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತಿತರರು ಜಾತಿಯಾಧಾರಿತವಾಗಿ ಸೃಷ್ಟಿಸಲಾಗಿರುವ ನಿಗಮ ಮತ್ತು ಮಂಡಳಿಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ನಡೆಸಿದೆ.

ಮೂರು ಪ್ರಶ್ನೆಗಳು ನ್ಯಾಯಾಲಯದ ಮುಂದಿವೆ ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ. ಅವುಗಳೆಂದರೆ:

1. ಆಯ್ದ ಜಾತಿಗಳನ್ನು ಕೇಂದ್ರೀಕರಿಸಿ ನಿಗಮ ಅಥವಾ ಮಂಡಳಿಗಳನ್ನು ಸೃಷ್ಟಿಸಲಾಗಿದ್ದು, ಅವುಗಳಿಗೆ ಅಪಾರ ಪ್ರಮಾಣದ ಸಾರ್ವಜನಿಕ ಹಣವನ್ನು ವೆಚ್ಚ ಮಾಡುತ್ತಿರುವುದು ಸಂವಿಧಾನದಲ್ಲಿ ಅಡಕವಾಗಿರುವ ಜಾತ್ಯತೀತ ಪರಿಕಲ್ಪನೆಯ ಉಲ್ಲಂಘನೆಯಾಗುತ್ತದೆಯೇ?

2. ಜಾತಿಯಾಧಾರಿತವಾಗಿ ನಿಗಮ ಅಥವಾ ಮಂಡಳಿಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿರುವುದರಿಂದ ಅವುಗಳಿಗೆ ಸಂವಿಧಾನದ ಪ್ರವೇಶಿಕೆ 32 ಮತ್ತು ಪಟ್ಟಿ 2ರಲ್ಲಿ ರಾಜ್ಯ ಸರ್ಕಾರಕ್ಕೆ ಕಾನೂನಿನ ಅನುಮತಿ ಇದೆಯೇ?

3. ಕೆಲವೇ ಕೆಲವು ಜಾತಿಗಳ ಅಭಿವೃದ್ಧಿಗೆ ಸಾರ್ವಜನಿಕ ಹಣವನ್ನು ವಿನಿಯೋಗಿಸುವುದು ಸಂವಿಧಾನದ 27ನೇ ವಿಧಿಯ ಉಲ್ಲಂಘನೆಯಾಗುತ್ತದೆಯೇ? ಎಂಬುದು ಸೇರಿದಂತೆ ಪಕ್ಷಕಾರರು ಎತ್ತಿರುವ ವಿವಿಧ ಪ್ರಶ್ನೆಗಳನ್ನು ಪರಿಗಣಿಸುವ ಅಗತ್ಯವಿದೆ ಎಂದಿದ್ದು, ಅಂತಿಮ ವಿಚಾರಣೆಯನ್ನು ಫೆಬ್ರವರಿ 2ರಂದು ನಡೆಸುವುದಾಗಿ ಹೇಳಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.

Kannada and Karnataka High Court

ಪದವಿ ಹಂತದಲ್ಲಿ ಕನ್ನಡ ಕಡ್ಡಾಯ

ಪದವಿ ಹಂತದಲ್ಲಿ ಕನ್ನಡ ಭಾಷಾ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಬಯಸದ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಮುಂದಿನ ಆದೇಶದವರೆಗೆ ಕನ್ನಡ ಕಲಿಕೆ ಕಡ್ಡಾಯ ಮಾಡದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್‌, ವ್ಯೋಮಾ ಲಿಂಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶನ್‌ ಮತ್ತು ಕೆಲವು ವಿದ್ಯಾರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಅರ್ಜಿದಾರರ ಪರ ವಕೀಲರ ವಾದವನ್ನು ನಾವು ಪರಿಗಣಿಸಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ ಆಧರಿಸಿ ಪದವಿ ಶಿಕ್ಷಣದ ಸಂದರ್ಭದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಯನ್ನೂ ಪರಿಗಣಿಸಬೇಕು ಎಂಬ ನಿಲುವನ್ನು ಮೇಲ್ನೋಟ ನಾವು ಹೊಂದಿದ್ದೇವೆ. ಈ ಹಂತದಲ್ಲಿ ರಾಜ್ಯ ಸರ್ಕಾರವು ಭಾಷೆಯನ್ನು ಕಡ್ಡಾಯಗೊಳಿಸಬಾರದು. ತಮ್ಮ ಇಚ್ಛೆಯ ಅನುಸಾರ ಕನ್ನಡವನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಅಧ್ಯಯನ ಮುಂದುವರಿಸಬಹುದಾಗಿದೆ. ಕನ್ನಡವನ್ನು ಆಯ್ಕೆ ಮಾಡಿಕೊಳ್ಳಲು ಬಯಸದ ವಿದ್ಯಾರ್ಥಿಗಳನ್ನು ಕನ್ನಡ ಅಧ್ಯಯನ ಮಾಡುವಂತೆ ಮುಂದಿನ ಆದೇಶದವರೆಗೆ ಒತ್ತಾಯ ಮಾಡಬಾರದು” ಎಂದು ಪೀಠ ಹೇಳಿದೆ.

ಮಾಹಿತಿ ತಂತ್ರಜ್ಞಾನ ನಿಯಮ ಪ್ರಶ್ನೆ

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮ-2021ನಿಬಂಧನೆ 3(1)(ಡಿ) ಮತ್ತು ನಿಬಂಧನೆ 7 ಅಧಿಕಾರದ ವ್ಯಾಪ್ತಿ ಮೀರಿದ್ದು, ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಚೈತ್ರಾ ವಿ ಎಂಬವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ ನಡೆಸಿದ್ದು, ಕೇಂದ್ರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಪ್ರತಿವಾದಿಗಳಿಗೆ ಆದೇಶಿಸಿದೆ.

ಕೇಂದ್ರ ಸರ್ಕಾರ ಜಾರಿ ಮಾಡಿರುವ ನಿಯಮಗಳು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸಿರುವ ಸಂವಿಧಾನದ 19(1)(ಎ) ವಿಧಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. “ನೂತನ ಐಟಿ ನಿಯಮಗಳಲ್ಲಿ ಬಳಸಲಾಗಿರುವ ಸಭ್ಯತೆ, ನೈತಿಕತೆ, ಸಾರ್ವಜನಿಕ ಆದೇಶ ಇತ್ಯಾದಿ ಪದಗಳು ಅಸ್ಪಷ್ಟವಾಗಿದ್ದು, ಇದನ್ನು ನಿಯಮಗಳು ಅಥವಾ ಅದು ಆಧರಿಸಿರುವ ಪ್ರಧಾನ ಶಾಸನದಲ್ಲಿ ವ್ಯಾಖ್ಯಾನಿಸಲಾಗಿಲ್ಲ. ಹೀಗಾಗಿ, ನಿರ್ದಿಷ್ಟ ಪದ ವ್ಯಾಖ್ಯಾನದ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಐಟಿ ನಿಯಮಗಳ ಜಾರಿ ಅಧಿಕಾರವು ಅಧಿಕಾರಿಗಳಿಗೆ ಲಭ್ಯವಾಗುವುದರಿಂದ ಅವರಿಗೆ ಹೆಚ್ಚಿನ ಅಧಿಕಾರ ದೊರೆಯಲಿದ್ದು, ಇದು ನಿಯಮಗಳ ಉದ್ದೇಶವನ್ನೇ ಸೋಲಿಸಬಹುದು. ಕಟ್ಟುಪಾಡುಗಳು ಹಾಗೂ ಸರಿಯಾದ ವ್ಯಾಖ್ಯಾನ ಇಲ್ಲದೇ ಇರುವುದರಿಂದ ದುರ್ಬಳಕೆಯಾಗುವ ಸಾಧ್ಯತೆ ಇದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಪ್ರಜಾಪ್ರಭುತ್ವದ ಬೆಳವಣಿಗೆಗೆ ಸರಾಗ ಮಾಹಿತಿ ಹಂಚಿಕೆ ಅತ್ಯಗತ್ಯವಾಗಿದೆ. ಹೊಣೆಗಾರಿಕೆ ನೆಪದಲ್ಲಿ ಮಾಧ್ಯಮವನ್ನು ನಿಯಂತ್ರಿಸುವ ಮೂಲಕ ಪರೋಕ್ಷವಾಗಿ ಸರಾಗವಾಗಿ ಮಾಹಿತಿ ಹಂಚಿಕೆಯಾಗದಂತೆ ತಡೆಯುವ ಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ವಾದಿಸಲಾಗಿದೆ.

ವಕ್ಫ್‌ ಕಾಯಿದೆ ಸಿಂಧುತ್ವ

ವಕ್ಫ್ ಕಾಯಿದೆ 1995ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿಯ ಪ್ರತಿಕ್ರಿಯೆ ಕೇಳಿದೆ. ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪ್ರದೀಪ್ ಸಿಂಗ್ ಯೆರೂರ್ ಅವರ ವಿಭಾಗೀಯ ಪೀಠ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡಿದೆ.

ಕಾಯಿದೆ ಒಂದು ನಿರ್ದಿಷ್ಟ ಧರ್ಮವನ್ನು ಉತ್ತೇಜಿಸಲು ಉದ್ದೇಶಿಸಿರುವುದರಿಂದ ಅದು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಬೆಂಗಳೂರು ಮೂಲದ ಶಿಕ್ಷಣ ತಜ್ಞ ಕೆ ಎಸ್ ಸುಬ್ರಮಣ್ಯನ್ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

“ರಾಜ್ಯವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ಭಾರತದ ಸಂವಿಧಾನದ ಭಾಗ III ಕ್ಕೆ ಬದ್ಧ ಮತ್ತು ಅಧೀನವಾಗಿರುತ್ತದೆ. ವಕ್ಫ್ ಕಾಯಿದೆಯನ್ನು ಜಾರಿಯು ಸಂವಿಧಾನದ 13 (2) ನೇ ವಿಧಿಯನ್ನು ಪರೀಕ್ಷಿಸುತ್ತದೆ. ಭಾರತದ ಸಂವಿಧಾನದ ಭಾಗ III ರಲ್ಲಿ ಏನನ್ನು ನಿಷೇಧಿಸಲಾಗಿದೆ ಎನ್ನುವುದನ್ನು ಗಮನಿಸದೆ ಒಂದು ಧರ್ಮವನ್ನು ಉತ್ತೇಜಿಸುವ ಅನಪೇಕ್ಷಿತ ಉದ್ದೇಶಕ್ಕಾಗಿ ಸರ್ಕಾರ ಅದನ್ನು ತಿರುಚಿದೆ” ಎಂದು ಉಲ್ಲೇಖಿಸಲಾಗಿದೆ.

ವಕ್ಫ್‌ಗಳ ಉತ್ತಮ ಆಡಳಿತ ಮತ್ತು ಮೇಲ್ವಿಚಾರಣೆ ನಡೆಸಲು ಕಾಯಿದೆ ಜಾರಿಗೆ ತರಲಾಗಿದ್ದು ಇದು ಸಂವಿಧಾನದ ಪ್ರಕಾರ ಸರ್ಕಾರದ ಚಟುವಟಿಕೆಯಲ್ಲ. ಅಲ್ಲದೆ ಸಂವಿಧಾನದ 25 ರಿಂದ 28 ನೇ ವಿಧಿಗಳನ್ನು ಉಲ್ಲಂಘಿಸಿರುವುದರಿಂದ ವಕ್ಫ್ ಕಾಯಿದೆಯು ಮೂಲಭೂತವಾಗಿ ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುತ್ತದೆ ಎಂಬುದು ಅರ್ಜಿದಾರರ ವಾದವಾಗಿದೆ.